

ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಈಗ ಮತ್ತೆ ಬಡ್ಡಿ ದರ ಹೆಚ್ಚಳವನ್ನು ಘೊಷಿಸಿದೆ. ಈ ಬಾರಿ 35 ಮೂಲಾಂಶ ಏರಿಕೆ ಮಾಡುವುದರೊಂದಿಗೆ ಸಾಲಗಾರರ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಪ್ರಸ್ತುತ ಏರಿಕೆಯೊಂದಿಗೆ ರೆಪೊ ದರವು ಶೇ. 6.25ಕ್ಕೆ ತಲುಪಿದೆ. ಇದೇ ವೇಳೆ ಸ್ಥಾಯಿ ಠೇವಣಿ ಸೌಲಭ್ಯ (ಎಸ್ಡಿಎಫ್) ದರವನ್ನು ಶೇ. 5.65ರಿಂದ ಶೇ. 6ಕ್ಕೆ ಹೆಚ್ಚಳ ಮಾಡಲಾಗಿದೆ. ಬ್ಯಾಂಕ್ಗಳಲ್ಲಿ ಹೆಚ್ಚುವರಿಯಾಗಿರುವ ಹಣವನ್ನು ಆರ್ಬಿಐನಲ್ಲಿ ಠೇವಣಿ ಮಾಡಿದರೆ ಸಿಗುವ ಬಡ್ಡಿ ದರ ಇದಾಗಿದೆ. ಆದರೆ, ಇದಕ್ಕೆ ಅನುಗುಣವಾಗಿ ಬ್ಯಾಂಕ್ಗಳು ಕೂಡ ತಮ್ಮಲ್ಲಿ ಠೇವಣಿ ಇಡುವವರಿಗೆ ನೀಡುವ ಬಡ್ಡಿ ದರದಲ್ಲಿ ಹೆಚ್ಚಳ ಮಾಡಲಿವೆಯೇ ಎಂಬುದು ಸ್ಪಷ್ಟವಾಗಬೇಕಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಮೇ ತಿಂಗಳಿನಿಂದ ಇದುವರೆಗೆ ಕೈಗೊಳ್ಳಲಾದ ಐದನೇ ರೆಪೊ ದರ ಏರಿಕೆ ಇದಾಗಿದ್ದು, ಒಟ್ಟಾರೆಯಾಗಿ ಶೇ. 2.25 ಬಡ್ಡಿ ದರ ಹೆಚ್ಚಳ ಮಾಡಲಾಗಿದೆ. ಈ ವರ್ಷದ ಮೇ 4ರಂದು 40 ಮೂಲಾಂಶಗಳಷ್ಟು ಬಡ್ಡಿ ದರವನ್ನು ಹೆಚ್ಚಳ ಮಾಡಿತ್ತು. ನಂತರ ಜೂನ್, ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಮೂರು ಬಾರಿ ತಲಾ ಮೂಲಾಂಶ ಏರಿಸಲಾಯಿತು. 2023ರ ಮಾರ್ಚ್ ವೇಳೆಗೆ ಬಡ್ಡಿ ದರವು ಶೇ. 6.5ಕ್ಕೆ ಏರಿಕೆಯಾಗಲಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹಣಕಾಸು ನೀತಿ ಸಭೆಯ ವರದಿಯಲ್ಲಿ ಪ್ರಸ್ತಾಪಿಸಿರುವುದು ಮತ್ತೊಂದು ಸುತ್ತಿನ ಏರಿಕೆಯ ಸ್ಪಷ್ಟ ಮುನ್ಸೂಚನೆಯಾಗಿದೆ.
ಹಣದುಬ್ಬರ ನಿಯಂತ್ರಿಸಲು ಹಾಗೂ ಆರ್ಥಿಕತೆ ನಿರ್ವಹಿಸಲು ಆರ್ಬಿಐ ರೆಪೊ ದರವನ್ನು ಹೆಚ್ಚಳ ಮಾಡುತ್ತ ಬಂದಿದೆ.ಈ ಕ್ರಮದೊಂದಿಗೆ ಹಣದುಬ್ಬರ ದರವನ್ನು ಶೇ. 6ರ ಮಿತಿಯೊಳಗೆ ತರಲು ಉದ್ದೇಶಿಸಲಾಗಿದೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಚಿಲ್ಲರೆ ಹಣದುಬ್ಬರವು ಕಳೆದ ಸೆಪ್ಟೆಂಬರ್ನಲ್ಲಿದ್ದ ಶೇ. 7.41ರಿಂದ ಅಕ್ಟೋಬರ್ನಲ್ಲಿ ಶೇ. 6.77ಕ್ಕೆ ಇಳಿಕೆಯಾಗಿದ್ದರೂ ಶೇ. 6ರ ಮಿತಿಯೊಳಗೆ ಇಲ್ಲವಾದ್ದರಿಂದ ರೆಪೊ ದರ ಏರಿಕೆ ಮುಂದುವರಿದಿದೆ.
ಹಣದುಬ್ಬರ ಅಂದರೆ ಬೆಲೆ ಏರಿಕೆ. ಇದನ್ನು ನಿಯಂತ್ರಿಸಲು ರೆಪೊ ದರ ಹೆಚ್ಚಿಸುವ ಅಸ್ತ್ರ ಎರಡು ಅಲಗಿನ ಕತ್ತಿಯಾಗಿದೆ ಎಂದು ಅನೇಕ ಆರ್ಥಿಕ ತಜ್ಞರ ಅಭಿಮತವಾಗಿದೆ. ರೆಪೊ ದರ ಹೆಚ್ಚಳವು ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಕುಸಿತಕ್ಕೂ ಕಾರಣವಾಗಬಹುದಾಗಿದೆ. ರೆಪೊ ದರ ಎಂದರೆ ವಾಣಿಜ್ಯ ಬ್ಯಾಂಕುಗಳಿಗೆ ಆರ್ಬಿಐ ವಿಧಿಸುವ ಬಡ್ಡಿ ದರ. ಇದು ಹೆಚ್ಚಾದಂತೆ ವಾಣಿಜ್ಯ ಬ್ಯಾಂಕ್ಗಳು ಕೂಡ ತಾವು ನೀಡುವ ಸಾಲದ ಮೇಲಿನ ಬಡ್ಡಿಯನ್ನು ಏರಿಸುತ್ತವೆ. ಇದರಿಂದಾಗಿ ಗೃಹ, ನಿವೇಶನ, ವಾಹನ ಸಾಲ ಮುಂತಾದ ದೀರ್ಘಾವಧಿ ಸಾಲ ಪಡೆದುಕೊಂಡವರ ಇಎಂಐಗಳ ಮೊತ್ತ ಹೆಚ್ಚುತ್ತದೆ. ಕೋವಿಡ್ ಮಹಾಮಾರಿ ಹಾಗೂ ರಷ್ಯಾ-ಯೂಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಸಾಕಷ್ಟು ಹೆಚ್ಚಳವಾಗಿದೆ.
ಕೋವಿಡ್ ಸಾಂಕ್ರಾಮಿಕದಿಂದಾಗಿ ಉದ್ಯೋಗ ನಷ್ಟ, ಸಂಬಳ ಕಡಿತ, ವ್ಯಾಪಾರ ಕುಂಠಿತದಂತಹ ತೊಂದರೆ ಅನುಭವಿಸಿದ್ದಾರೆ. ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿರುವ ಜನರಿಗೆ ಈಗ ಬಡ್ಡಿ ದರದ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಹೊರೆಯನ್ನು ತುಸುವಾದರೂ ತಗ್ಗಿಸುವ ಶಕ್ಯತಃ ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳಬೇಕೆಂಬುದು ಜನರ ಸಹಜ ನಿರೀಕ್ಷೆ.