ಶುಭ ಸೂಚನೆ; 5 ವರ್ಷಗಳಲ್ಲಿ ಭಾರತದ ಆರ್ಥಿಕತೆ ಉತ್ತುಂಗದತ್ತ

5555
Published on

ಭಾರತವು 2027ಕ್ಕೆ ವಿಶ್ವದ ಮೂರನೇ ಬೃಹತ್ ಆರ್ಥಿಕತೆ ಶಕ್ತಿಯಾಗಿ ರೂಪುಗೊಳ್ಳಲಿದೆ. ಅಲ್ಲದೆ, 2030ಕ್ಕೆ ಜಾಗತಿಕ ಷೇರು ಮಾರುಕಟ್ಟೆಯಲ್ಲೂ ಮೂರನೇ ಸ್ಥಾನಕ್ಕೆ ಏರಲಿದೆ ಎಂದು ಅಮೆರಿಕದ ಷೇರುಪೇಟೆ ವಿಶ್ಲೇಷಣಾ ಸಂಸ್ಥೆ ಮಾರ್ಗನ್ ಸ್ಟ್ಯಾನ್ಲಿ ಭವಿಷ್ಯ ನುಡಿದಿದೆ. ಈ ಮುನ್ನೋಟವು ವಾಸ್ತವಾಂಶಗಳನ್ನು ಆಧರಿಸಿದೆ ಎಂಬುದಕ್ಕೆ ಪುಷ್ಟಿಯಾಗಿ ಅಂಕಿ-ಅಂಶಗಳನ್ನು ಹಾಗೂ ವಿಶ್ಲೇಷಣೆಗಳನ್ನು ‘ಭಾರತದ ಸನ್ನಿಹಿತ ಆರ್ಥಿಕ ಉತ್ಕರ್ಷ’ ಎಂಬ ವರದಿಯಲ್ಲಿ ಸವಿವರವಾಗಿ ಒದಗಿಸಿದೆ.

ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಪ್ರಮಾಣ ಈಗಿರುವ 3.50 ಲಕ್ಷ ಕೋಟಿ ಡಾಲರ್​ನಿಂದ (286 ಲಕ್ಷ ಕೋಟಿ ರೂಪಾಯಿ) 2031ರ ವೇಳೆಗೆ 7.50 ಲಕ್ಷ ಕೋಟಿ ಡಾಲರ್​ಗೆ (613 ಲಕ್ಷ ಕೋಟಿ ರೂಪಾಯಿ) ಏರಲಿದೆ. ವಿದೇಶಗಳಿಂದ ಭಾರತಕ್ಕೆ ಸಿಗುವ ಹೊರಗುತ್ತಿಗೆಯ ಹೆಚ್ಚಳ, ಅಂದರೆ ಹೊರದೇಶದ ಕಂಪನಿಗಳಿಂದ ಭಾರತದ ಉದ್ಯೋಗಿಗಳ ನೇಮಕಾತಿ ದ್ವಿಗುಣವಾಗಿ 1.1 ಕೋಟಿಗೆ ಏರಲಿದೆ. ತಯಾರಿಕಾ ವಲಯದ ಬೆಳವಣಿಗೆ ಪ್ರಸ್ತುತ ಶೇ.15.6ರಿಂದ 2031ರ ಹೊತ್ತಿಗೆ ಶೇ.21ಕ್ಕೆ ಹೆಚ್ಚಳವಾಗಬಹುದಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2019 ಮತ್ತು 2020ನೇ ಸಾಲಿನಲ್ಲಿ ಕೋವಿಡ್ ಪರಿಣಾಮವಾಗಿ ಭಾರತ ಸೇರಿದಂತೆ ಜಗತ್ತಿನ ಎಲ್ಲ ದೇಶಗಳು ಆರ್ಥಿಕ ಸಂಕಷ್ಟ ಎದುರಿಸಿವೆ. ಈ ಅವಧಿಯಲ್ಲಿ ಭಾರತದಲ್ಲಿ ನಿರುದ್ಯೋಗ ದರವು ಹೆಚ್ಚಾಗಿ ಆತಂಕದ ಸ್ಥಿತಿ ತಲುಪಿತ್ತಾದರೂ ಈಗ ಚೇತರಿಕೆ ಕಂಡುಬರುತ್ತಿದೆ. ಹಣದುಬ್ಬರ ದರ ಸ್ವಲ್ಪ ಏರಿಕೆಯಾಗಿದ್ದರೂ ಜಗತ್ತಿನ ಬಹುತೇಕ ದೇಶಗಳಲ್ಲಿ ಕೂಡ ಇದೇ ತೆರನಾದ ಪರಿಸ್ಥಿತಿ ಇದೆ. ಹೀಗಾಗಿ, ವರದಿಯಲ್ಲಿನ ನಿರೀಕ್ಷೆಗಳು ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳು ಅಧಿಕವಾಗಿವೆ.

1947ರಲ್ಲಿ ಭಾರತದ ಒಟ್ಟು ದೇಶಿಯ ಉತ್ಪನ್ನವು 2.7 ಲಕ್ಷ ಕೋಟಿ ರೂಪಾಯಿ ಹಾಗೂ ತಲಾದಾಯ 230 ರೂಪಾಯಿ ಆಗಿತ್ತು. 2019ರಲ್ಲಿ ನಮ್ಮ ದೇಶದ ಜಿಡಿಪಿ 2.94 ಟ್ರಿಲಿಯನ್ ಡಾಲರ್ (235 ಲಕ್ಷ ಕೋಟಿ ರೂಪಾಯಿ) ತಲುಪುವ ಮೂಲಕ ಬ್ರಿಟನ್ ಜಿಡಿಪಿಯನ್ನು (2.83 ಟ್ರಿಲಿಯನ್ ಡಾಲರ್) ಹಿಂದಿಕ್ಕಿ ಪ್ರಸ್ತುತ ಜಗತ್ತಿನಲ್ಲಿ ಐದನೇ ಸ್ಥಾನ ತಲುಪಿದೆ. 2025ರ ಹೊತ್ತಿಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್​ಗೆ (408 ಲಕ್ಷ ಕೋಟಿ) ಹೆಚ್ಚಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಕಿಕೊಂಡಿದ್ದಾರೆ. ಒಂದೂವರೆ ವರ್ಷದಲ್ಲಿ 10 ಲಕ್ಷ ಸರ್ಕಾರಿ ಉದ್ಯೋಗ ಒದಗಿಸುವುದಾಗಿ ಹೇಳಿದ್ದು ಈ ನಿಟ್ಟಿನಲ್ಲಿ ಕ್ರಮವಾಗುತ್ತಿದೆ.

ಆದರೆ, 140 ಕೋಟಿ ಜನಸಂಖ್ಯೆಯ ದೇಶದಲ್ಲಿ ಸರ್ಕಾರಿ ನೌಕರಿಗಳ ಮೂಲಕವೇ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಒದಗಿಸಲಾಗದು. ವ್ಯಾಪಕ ಹೂಡಿಕೆಯಾಗಿ ಖಾಸಗಿ ವಲಯದ ಕೈಗಾರಿಕೆ ಹಾಗೂ ಉದ್ಯಮಗಳು ಬೆಳೆದರೆ ಮಾತ್ರ ಹೆಚ್ಚು ಉದ್ಯೋಗಾವಕಾಶ ದೊರೆಯಲು ಸಾಧ್ಯ. ಈ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಮೂಲಕ ದೇಶದಲ್ಲೇ ಉತ್ಪಾದನೆಗೆ ಹೆಚ್ಚಿನ ಒತ್ತನ್ನು ಸರ್ಕಾರ ನೀಡುತ್ತಿದೆ. ಮಾರ್ಗನ್ ಸ್ಟ್ಯಾನ್ಲಿ ವರದಿಯಲ್ಲಿ ಕೂಡ ಹೂಡಿಕೆದಾರರಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಕ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಜಿಡಿಪಿಯು ದೇಶದ ಆರ್ಥಿಕ ಸ್ಥಿತಿಗತಿ ತೋರಿಸುವ ಪ್ರಮುಖ ಮಾನದಂಡವಾಗಿದ್ದು, ಜನರ ತಲಾದಾಯವನ್ನು ಸೂಚಿಸುತ್ತದೆ. ಭಾರತದ ಜಿಡಿಪಿ ದುಪ್ಪಟ್ಟಾಗುವ ಸಂಗತಿ ಭಾರತೀಯರ ತಲಾದಾಯ ಕೂಡ ದುಪ್ಪಟ್ಟಾಗುತ್ತದೆ ಎಂಬ ಶುಭಸೂಚನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net