ಮಡಿ ಮಾಡುವವರ ಬದುಕಿಗೆ ಬೇಕು ಭದ್ರತೆ

Machideva
Published on
ನಾಡಿನ ತಳಸಮುದಾಯಗಳಲ್ಲಿ ಮಡಿವಾಳ ಜನಾಂಗವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದಿದ್ದರೂ ಈ ಜನಾಂಗವು ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದಿದೆ. ಇಡೀ ಸಮಾಜದ ಮಡಿ ಮಾಡುವ ಕಾಯಕ ವೃತ್ತಿಯಲ್ಲಿ ತೊಡಗಿರುವ ಈ ವರ್ಗದ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಹರಸಾಹಸ ಮಾಡಬೇಕಿದೆ. ಸಮುದಾಯದ ಬವಣೆಗಳೇನು, ಬೇಡಿಕೆಗಳೇನು ಎಂಬುದರ ಕುರಿತು ವಿಜಯವಾಣಿ ಕಾಯಕ ಸಮಾಜ ಸಂವಾದದ ಮೂಲಕ ತೆರೆದಿಟ್ಟಿದೆ. ಇತ್ತೀಚೆಗಷ್ಟೇ ಸಂಘಟಿತರಾಗುವತ್ತ ಹೆಜ್ಜೆ ಇಟ್ಟಿರುವ ಮಡಿವಾಳರು ತಮ್ಮ ಸಮುದಾಯ ಹಿಂದುಳಿದಿರುವುದನ್ನು ಪರಿಗಣಿಸಿ ಮೀಸಲಾತಿಯಲ್ಲಿ ‘2ಎ’ ಪ್ರವರ್ಗದಿಂದ ಪರಿಶಿಷ್ಟ ಜಾತಿ (ಎಸ್​ಸಿ)ಗೆ ಸೇರ್ಪಡೆ ಮಾಡಬೇಕೆಂಬ ಹಕ್ಕೊತ್ತಾಯ ಮುಂದಿಟ್ಟಿದ್ದು, ಅದನ್ನು ಸರ್ಕಾರಕ್ಕೆ ತಲುಪಿಸುವ ಪ್ರಯತ್ನ ಇಲ್ಲಿದೆ.

ಧೋಬಿ ಘಾಟ್ ಅಭಿವೃದ್ಧಿಪಡಿಸಿ

ಬೆಂಗಳೂರು ನಗರದಲ್ಲಿ 36 ಸೇರಿದಂತೆ ರಾಜ್ಯದಲ್ಲಿ 362 ಧೋಬಿ ಘಾಟ್​ಗಳು ಇದ್ದು, 1.20 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. ಆದರೆ, ಧೋಬಿ ಘಾಟ್​ಗೆ ಮೀಸಲಿಟ್ಟ ಜಾಗ ಒತ್ತುವರಿ ಹೆಚ್ಚಾಗಿದೆ. ಭೂಗಳ್ಳರಿಂದ ಧೋಬಿ ಘಾಟ್​ಗಳನ್ನು ಸಂರಕ್ಷಣೆ ಮಾಡಲು ಮಡಿವಾಳರ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಇವುಗಳನ್ನು ತರಬೇಕಿದೆ ಎಂಬ ಪ್ರಸ್ತಾಪವನ್ನು ಸಂಘವು ಸರ್ಕಾರದ ಮುಂದಿಟ್ಟಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಧೋಬಿಘಾಟ್ ಮಾದರಿಯಲ್ಲಿ ಇತರೆಡೆಯೂ ಅಭಿವೃದ್ಧಿಪಡಿಸಲು ಆಗ್ರಹಿಸಿದೆ. ಈ ಬೇಡಿಕೆ ಈಡೇರಿಸುವುದಾಗಿ ವಿವಿಧ ರಾಜಕೀಯ ಪಕ್ಷಗಳು ಭರವಸೆ ನೀಡಿದ್ದರೂ ಅದಿನ್ನೂ ಸಾಕಾರವಾಗಿಲ್ಲ ಎಂಬ ನೋವು ಮಡಿವಾಳರಲ್ಲಿದೆ.

ಸರ್ಕಾರಿ ಕೆಲಸಕ್ಕೆ ಕುತ್ತು: ರಾಜ್ಯ ಪೊಲೀಸ್ ಇಲಾಖೆ, ಆಸ್ಪತ್ರೆ, ಗಾರ್ವೆಂಟ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಧೋಬಿ ಕೆಲಸಕ್ಕೆಂದು ಮಡಿವಾಳ ಸಮಾಜದವರನ್ನೇ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೀಗ ಈ ಉದ್ಯೋಗಕ್ಕೆ ಅನ್ಯ ಜಾತಿಯವರನ್ನು ನೇಮಕ ಮಾಡಿಕೊಳ್ಳುತ್ತಿರುವುದರಿಂದ ಮಡಿವಾಳ ಜನಾಂಗಕ್ಕೆ ತೀವ್ರ ಅನ್ಯಾಯವಾಗುತ್ತಿದೆ ಎಂಬ ಅಳಲು ವ್ಯಕ್ತವಾಗಿದೆ.

ನಿಗಮಕ್ಕೆ ಬೇಕಿದೆ ಕಾಯಕಲ್ಪ: 2019ರಲ್ಲಿ ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರು. ಆದರೆ, 3 ವರ್ಷಗಳ ಕಾಲ ನಿಗಮಕ್ಕೆ ಅಧ್ಯಕ್ಷರ ನೇಮಕವಾಗಲಿಲ್ಲ. ಇತ್ತೀಚೆಗೆ ನಿಗಮಕ್ಕೆ ಅಧ್ಯಕ್ಷರಾಗಿ ಡಾ. ರಾಜು ಎಂ ತಲ್ಲೂರು ಅವರನ್ನು ಸರ್ಕಾರ ನೇಮಕ ಮಾಡಿದ್ದರೂ ನಿಗಮ ಕಚೇರಿಗೆ ಜಾಗ ಕೊಟ್ಟಿಲ್ಲ. ಅಧ್ಯಕ್ಷರಿಗೆ ಕಾರು ಸಹ ಕೊಟ್ಟಿಲ್ಲ. ಪ್ರಸ್ತುತ ಇರುವ 5 ಕೋಟಿ ರೂ. ಅನುದಾನದಲ್ಲಿ ಯಾವ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ. ಎಲ್ಲ ನಿಗಮಕ್ಕೂ ನೀಡುವಂತೆ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೂ 100 ಕೋಟಿ ರೂ. ಹಣ ನೀಡಬೇಕೆಂದು ಸಂಘವು ಒತ್ತಾಯಿಸಿದೆ.

ವಿಧಾನಸಭೆ ಪ್ರವೇಶ ಖಚಿತ: ರಾಜ್ಯದಲ್ಲಿ ಮಡಿವಾಳ ಸಮುದಾಯದವರು ಅಂದಾಜು 14 ಲಕ್ಷ ಇದ್ದಾರೆ. ಇಲ್ಲಿಯವರೆಗೂ ವಿಧಾನಸಭೆಗೆ ಓರ್ವ ಶಾಸಕ ಕೂಡ ಪ್ರವೇಶ ಮಾಡಿಲ್ಲ. ವಿಧಾನ ಪರಿಷತ್ ಸದಸ್ಯರಾಗಿ ಮಾತ್ರ ಆಯ್ಕೆಯಾಗಿದ್ದಾರೆ. ಹೀಗಾಗಿ, ಜನಾಂಗದ ಹಕ್ಕೊತ್ತಾಯಕ್ಕೆ ರಾಜಕೀಯವಾಗಿ ಧ್ವನಿ ಏರಿಸುವವರ ಅಭಾವ ಇದೆ. ರಾಜ್ಯದ 48 ವಿಧಾನಸಭಾ ಕ್ಷೇತ್ರದಲ್ಲಿ ಮಡಿವಾಳ ಜನಾಂಗದ ಮತಗಳು ನಿರ್ಣಾಯಕ ಆಗಲಿವೆ. ಅದಕ್ಕಾಗಿ ಕಾಂಗ್ರೆಸ್​ನಿಂದ 2 ಕ್ಷೇತ್ರ ಮತ್ತು ಬಿಜೆಪಿಯಿಂದ 1 ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕೊಡುವಂತೆ ಒತ್ತಾಯ ಮಾಡಿದ್ದೇವೆ. ಟಿಕೆಟ್ ದೊರೆತರೆ ಈ ಬಾರಿ ಓರ್ವ ಅಭ್ಯರ್ಥಿಯನ್ನಾದರೂ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿಕೊಡುವ ಪಣ ತೊಟ್ಟಿದ್ದೇವೆ ಎಂದು ಮಡಿವಾಳ ಮುಖಂಡರು ಹೇಳುತ್ತಾರೆ.

ನಿಗಮದಿಂದ ಹಲವು ಕಾರ್ಯ: ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಲ್ಲಿದ್ದ 6 ಕೋಟಿ ರೂ. ಹಣವನ್ನು 2022-23ನೇ ಸಾಲಿನಲ್ಲಿ ನೇರ ಸಾಲ, ಸ್ವಯಂ ಉದ್ಯೋಗ ಸಾಲ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಳಕೆ ಮಾಡಲಾಗಿದೆ. ಹೆಚ್ಚುವರಿಯಾಗಿ ದೊರೆತಿರುವ 9 ಕೋಟಿ ರೂ. ಮೊತ್ತಕ್ಕೆ ಕ್ರಿಯಾ ಯೋಜನೆ ಸಿದ್ಧವಾಗಿದೆ. ಇದರಡಿ ಸ್ವಯಂ ಉದ್ಯೋಗ ಸಾಲ, ಗಂಗಾ ಕಲ್ಯಾಣ ಯೋಜನೆ, ಧೋಬಿ ಘಾಟ್ ಅಭಿವೃದ್ಧಿ, ಇಸ್ತ್ರಿ ಪೆಟ್ಟಿಗೆ, ಕ್ಯಾಬ್ ಖರೀದಿಗೆ ಸಬ್ಸಿಡಿ ನೀಡಲು ಸರ್ಕಾರದ ಒಪ್ಪಿಗೆ ಕಾಯುತ್ತಿದ್ದೇವೆ. 2008ರಲ್ಲಿ ರಚನೆಯಾದ ಅನ್ನಪೂರ್ಣಮ್ಮ ಅವರ ಕುಲಶಾಸ್ತ್ರ ಅಧ್ಯಯನ ವರದಿ ಅನುಷ್ಠಾನ ಮತ್ತು ಧೋಬಿ ಘಾಟ್​ಗೆ ಪ್ರತ್ಯೇಕ ಅನುದಾನ ಮೀಸಲಿಡಬೇಕೆಂದು ಸಿಎಂಗೆ ಮನವಿ ಮಾಡಿದ್ದು, ಮಡಿವಾಳ ಜನಾಂಗಕ್ಕೆ ಸ್ಪಂದಿಸಬೇಕೆಂದು ನಿಗಮದ ಅಧ್ಯಕ್ಷ ಡಾ. ರಾಜು ಎಂ ತಲ್ಲೂರು ಮನವಿ ಮಾಡಿದ್ದಾರೆ.

ಹಾಸ್ಟೆಲ್ ಸ್ಥಾಪಿಸಿ: ಸರ್ಕಾರದ ನೆರವು ಸಿಗದ ಹಿನ್ನೆಲೆಯಲ್ಲಿ ಮಡಿವಾಳ ಸಮುದಾಯದ ಸಾಕಷ್ಟು ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುವಂತಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಸತಿ, ಊಟ ಹಾಗೂ ಇತರ ಸೌಲಭ್ಯಕ್ಕೆ ಸಹಾಯಧನ ಸಿಗುತ್ತಿಲ್ಲ. ವಿದ್ಯಾರ್ಥಿವೇತನವೂ ಇಲ್ಲದಂತಾಗಿದೆ. ಹಾಸ್ಟೆಲ್ ಸೌಲಭ್ಯ ಇಲ್ಲದೆ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕುಗೊಳಿಸುವ ಅನಿವಾರ್ಯತೆಗೆ ಸಿಲುಕುವಂತಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ರಾಜ್ಯಾದ್ಯಂತ ಹಾಸ್ಟೆಲ್​ಗಳನ್ನು ನಿರ್ವಿುಸಬೇಕು ಎಂಬ ಒತ್ತಾಯ ಸಮುದಾಯದಿಂದ ಕೇಳಿಬಂದಿದೆ.

ಮಡಿವಾಳ ಸಮಾಜ ಅತಿ ಹಿಂದುಳಿದಿರುವುದನ್ನು ಒಪ್ಪಿ ವಿವಿಧ ರಾಜಕೀಯ ಪಕ್ಷಗಳು ನಮ್ಮ ಸಮುದಾಯವನ್ನು ‘2ಎ’ ಪ್ರವರ್ಗದಿಂದ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವ ಭರವಸೆ ನೀಡಿವೆ. ಇದನ್ನು ಕಾರ್ಯ ರೂಪಕ್ಕೆ ತರಲು ಸಂಘವು ಸತತವಾಗಿ ಹೋರಾಟ ನಡೆಸಿದೆ. ಮೀಸಲು ಬೇಡಿಕೆಯನ್ನು ಈಡೇರಿಸಿದರೆ ನಮ್ಮ ಸಮುದಾಯದ ಎಲ್ಲರೂ ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ. | ಸಿ.ನಂಜಪ್ಪ ಅಧ್ಯಕ್ಷ, ರಾಜ್ಯ ಮಡಿವಾಳರ ಸಂಘ ಮಡಿವಾಳ ಸಮುದಾಯ ರಾಜಕೀಯ ವಾಗಿ ಸಶಕ್ತವಾಗದ ಹಿನ್ನೆಲೆಯಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ. ನಮ್ಮ ಸಮಾಜದವರನ್ನು ವಿದ್ಯಾವಂತರನ್ನಾಗಿ ಮಾಡಲು ಹಾಸ್ಟೆಲ್ ಸೌಲಭ್ಯ ಹೆಚ್ಚಿಸಬೇಕು. | ಬಿ.ಆರ್.ಪ್ರಕಾಶ್ ಪ್ರಧಾನ ಕಾರ್ಯದರ್ಶಿ, ರಾಜ್ಯ ಮಡಿವಾಳರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net