

ಮಹಲಿಂಗರಂಗನು ಪರಮಾತ್ಮಪದವನ್ನು ತಿಳಿದವನಷ್ಟೆ. ಅದು ಅಪರೋಕ್ಷಾನುಭೂತಿಯ ಮೂಲಕ ಅವನಿಗೆ ತಿಳಿದಿದೆ. ಅದ್ವಯ ತತ್ತ್ವದಲ್ಲಿ ತಿಳಿಯುವ ಉಪಕ್ರಮವೇ ಪ್ರಧಾನ. ತಿಳಿದು ತಿಳಿಯಾದಾಗ ವಿಶಿಷ್ಟವಾದ ಪರಮಾತ್ಮನ ಅನುಭವ ಸಾಧಕನಿಗೆ ಉಂಟಾಗುತ್ತದೆ. ಇಲ್ಲಿಯ ವರೆಗೆ ಮಹಲಿಂಗರಂಗನು ನಾನಾ ಪ್ರಕಾರಗಳಲ್ಲಿ ಪರಮಾತ್ಮಪದವನ್ನು ನಿರ್ವಚಿಸಿದ ಅನಂತರ ಹೇಳುವ ಮಾತಿದು:
ಮೂರು ತನು, ಮೂರಾವಸ್ಥೆಯ,
ಮೂರು ಗುಣಗಳ, ಮೂರು ಹಮ್ಮಿನ,
ಮೂರೆನಿಪ ತ್ರಿಪುಟಿಯ, ತ್ರಿವರ್ಗವ, ತ್ರಿಕರಣಂಗಳನು, |
ಮೂರು ಕಾಲವ, ಮೂರು ಲೋಕವ,
ಮೂರು ಶಕ್ತಿಯ, ಮೂರು ಗತಿಗಳ,
ಮೀರಿ ತೋರುವ ತುರ್ಯವೇ ಪರಮಾತ್ಮಪದವೆಂದ || 7.22
ಮಹಲಿಂಗರಂಗನು ಇಲ್ಲಿ ಹೇಳಿರುವ ‘ತ್ರಯಾತ್ಮಕ’ ವಿವರಗಳನ್ನು ಈ ಹಿಂದಿನ ಅನೇಕ ಅಧ್ಯಾಯಗಳಲ್ಲಿ ವಿವರಿಸಿದ್ದಾನೆ. ಸಾಧಕರು ಆಯಾ ಸ್ಥಾನಗಳಲ್ಲಿ ಬಂದಿರುವ ವಿಚಾರಗಳನ್ನು ತತ್ತ್ವದ ದೃಷ್ಟಿಯಿಂದ ಪರಾಂಬರಿಸುವುದು ಸೂಕ್ತ. ಈ ಪದ್ಯದಲ್ಲಿ ‘ಮೂರುಗತಿ’ ಎಂಬ ಮಾತು ಬಂದಿದೆಯಷ್ಟೆ. ಈ ಅಂಶವನ್ನು ಸ್ವಲ್ಪ ವಿವರಿಸಿಕೊಳ್ಳುವುದು ತತ್ತ್ವದ ದೃಷ್ಟಿಯಿಂದ ಸೂಕ್ತ. ದೇವಯಾನವು ದೇವತೋಪಾಸನೆಗೆ ಸಂಬಂಧಿಸಿದ್ದು. ಇದಕ್ಕೆ ಶುಕ್ಲಮಾರ್ಗವೆಂದೂ ಅರ್ಚಿರಾದಿಮಾರ್ಗವೆಂದೂ ಕರೆಯುವುದುಂಟು. ಇನ್ನು ಎರಡನೆಯ ಗತಿ ಪಿತೃಯಾನ. ಇದು ಇಷ್ಟಾಪೂರ್ತಗಳನ್ನು ಯಾರು ಮಾಡಿರುತ್ತಾರೋ ಅವರಿಗೆ ದೊರಕುವ ಸದ್ಗತಿ. ಪಿತೃಯಾನಕ್ಕೆ ಕೃಷ್ಣಮಾರ್ಗ-ಧೂಮಮಾರ್ಗ ಎಂಬ ಪರ್ಯಾಯ ನಾಮಗಳು ಉಂಟು. ಆದರೆ, ಇವು ಹೆಚ್ಚಿಗೆ ಬಳಕೆಯಲ್ಲಿಲ್ಲ. ದೇವಯಾನ-ಪಿತೃಯಾನ ಇವೆರಡಕ್ಕೂ ಅರ್ಹರಲ್ಲದವರದ್ದು ಕ್ಷುದ್ರಜಂತುಗಳ ಜನನ-ಮರಣವೇ ಮೂರನೆಯ ಗತಿ. ಈ ಗತಿಯನ್ನು ವಾಚಸ್ಪತಿಮಿಶ್ರರು ಭಾಮತೀ ವ್ಯಾಖ್ಯಾನದಲ್ಲಿ ‘ನರಕ’ವೂ ಸೇರುತ್ತದೆಂದು ಸೂಚ್ಯವಾಗಿ ತಿಳಿಸಿದ್ದಾರೆ. ಈ ರೀತಿಯಾಗಿ ಪರಮಾತ್ಮಪದವನ್ನು ವೈಶಂಪಾಯನರು ವಿವರಿಸಿದಾಗ ಶುಕಮುನಿಯ ಮನಸ್ಸಿನ ತುಡಿತವು ಪೂರ್ಣವಾಗಿ ಸಮಾಧಾನಗೊಂಡಿತು. ಆಗ ಶುಕಮುನಿಯು ವೈಶಂಪಾಯನರ ಪಾದಗಳಿಗೆ ನಮಸ್ಕರಿಸಿದನು. ಸತ್ಯಸ್ವರೂಪನಾದ ಮೋಕ್ಷಸಂಬಂಧವನ್ನು ಹೊಂದಿದ ಸಹಜಾನಂದ ಗುರುವನ್ನು ಶುಕಮುನಿಯು ಸ್ತುತಿಸಿದನು.
ಮಹಲಿಂಗರಂಗನು ಇಪ್ಪತ್ತೆರಡು ಪದ್ಯಗಳಲ್ಲಿ ಪರಮಾತ್ಮನ ಸ್ವರೂಪವನ್ನು ತಿಳಿಸಲು ಈ ಅಧ್ಯಾಯದಲ್ಲಿ ಪ್ರಯತ್ನಿಸಿದ್ದಾನೆ. ಶ್ರೀಮಲ್ಲಿಕಾರ್ಜುನನ ಸ್ತುತಿಯೊಡನೆ ಪ್ರಸ್ತುತ ಅಧ್ಯಾಯವು ಮುಗಿಯುತ್ತದೆ.
ವ್ಯೋಮಕೇಶ, ಮಹೇಶ, ಶಂಕರ,
ವಾಮದೇವ, ನರೇಣ್ಯ, ವರಗುಣ
ಧಾಮ, ವಾಸುಕಿಭೂಪ, ವೃಷಭಾರೂಢ, ವಿಶ್ವೇಶ, |
ಭೀಮ, ಭರ್ಗ, ಕಪರ್ದಿ, ಶಿವ, ಸು
ತ್ರಾಮನಮಿತ, ಪಿನಾಕಿ, ಗಿರಿಜಾ
ಕಾಮುಕ, ಶ್ರೀಮಲ್ಲಿಕಾರ್ಜುನ ಸಲಹು ಮೂಜಗವ || 7.24
ಈ ಪದ್ಯದಲ್ಲಿ ‘ಸುತ್ರಾಮನಮಿತ’ ಎಂದಿದೆ. ಇಂದ್ರನಿಂದ ನಮಸ್ಕಾರ ಪಡೆಯುವಂಥ ಎಂದು ಅರ್ಥ. ‘ಗಿರಿಜಾಕಾಮುಕ’ ಎಂದರೆ ಗಿರಿಜೆಯ ಪತಿ ಎಂದು ತಿಳಿಯಬೇಕು.
ಮಹಲಿಂಗರಂಗನು ಪ್ರತಿಯೊಂದು ಅಧ್ಯಾಯವನ್ನು ಸೋಪಾನಕ್ರಮವಾಗಿ ‘ತತ್ತ್ವಪದ್ಧತಿ’ಯ ಮೂಲಕ ನಿರೂಪಿಸಿದ್ದಾನೆ. ಆ ಕ್ರಮ ಪದ್ಧತಿಯು ಪ್ರಸ್ತುತ ಅಧ್ಯಾಯ ಮುಗಿದ ನಂತರ ಮುಂದಿನ ಅಧ್ಯಾಯದಲ್ಲಿ ಪ್ರಾರಂಭವಾಗುತ್ತದೆ. ಇಲ್ಲಿಗೆ ಏಳನೆಯ ಅಧ್ಯಾಯವಾದ ‘ಪರಮಾತ್ಮಪದ ನಿರೂಪಣ’ ಮುಗಿಯಿತು.
(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)
(ಪ್ರತಿಕ್ರಿಯಿಸಿ: mallepuram@gmail.com)
(ನಾಳೆ, ಶ್ರೀ ಗುರು ರಾಘವೇಂದ್ರಸ್ವಾಮಿಗಳ ಬಗೆಗಿನ ಅಂಕಣ ‘ಕಲ್ಪತರು’)