ಅಂತರಂಗ: ತಂತ್ರಶಾಸ್ತ್ರ ದರ್ಶನದಲ್ಲಿ ದೀಕ್ಷಾ ಎಂದರೇನು?

Antaranga vvani
Published on

ದೀಕ್ಷಾ: ದೀಕ್ಷಾ ಎಂದರೇನು? ಆಧ್ಯಾತ್ಮಿಕ ಜೀವನಕ್ಕೆ ಅಂಕುರಾರ್ಪಣವಾಗುವುದು ದೀಕ್ಷೆ ಎನಿಸಿಕೊಳ್ಳುತ್ತದೆ. ‘ಕ್ಷಿ’

ಅಂದರೆ ನಾಶಮಾಡುವುದು - ಶಿಷ್ಯನ ಪಾಪಗಳನ್ನೆಲ್ಲ ನಾಶಮಾಡುವುದು; ‘ದಾ’ ಅಂದರೆ ಕೊಡುವುದು - ಅವನಿಗೆ ಜ್ಞಾನ ಕೊಡುವುದು. ಈ ವ್ಯುತ್ಪತ್ತಿಯಿಂದ ‘ದೀಕ್ಷೆ’ಗೆ ಆ ಹೆಸರು ಬಂದಿದೆ. ಹಿಂದೂಪಂಚಾಂಗದ ಪ್ರಕಾರ ಯಾವ ದಿನ, ಕಾಲ ಶುಭವೋ ಆ ದಿನ, ಆ ಕಾಲದಲ್ಲಿ ದೀಕ್ಷೆ ನೀಡುವುದು ಸಂಪ್ರದಾಯ. ಗ್ರಹಣದ ದಿನಗಳು, ಅದರಲ್ಲೂ ಚಂದ್ರಗ್ರಹಣದ ದಿನ ಅತ್ಯಂತ ಶುಭವೆಂದು ಎಲ್ಲರ ಒಮ್ಮತ. ತಂತ್ರಶಾಸ್ತ್ರಗಳಲ್ಲಿ ಅನೇಕ ವಿಧದ ದೀಕ್ಷೆಗಳನ್ನು ಪಟ್ಟಿ ಮಾಡಿದ್ದಾರೆ. ಸರ್ವಮಾನ್ಯವಾದ ಒಂದು ವರ್ಗೀಕರಣ ಹೀಗೆ ಇದೆ: ಕ್ರಿಯಾವತೀ, ವರ್ಣಮಯೀ, ಕಲಾವತೀ, ವೇಧಮಯೀ. ಕ್ರಿಯಾವತೀ ದೀಕ್ಷೆಯಲ್ಲಿ ಗುರುವು ಅನೇಕ ತಂತ್ರೋಕ್ತ ಕ್ರಿಯೆಗಳನ್ನು ಆಚರಿಸಬೇಕಾಗುತ್ತದೆ. ವರ್ಣಮಯೀ ದೀಕ್ಷೆಯಲ್ಲಿ ಗುರುವು ಶಿಷ್ಯನ ಅಂಗಾಂಗಗಳಲ್ಲಿ ಶಕ್ತಿಯ, ದೇವಿಯ ಬೀಜಾಕ್ಷರಗಳಲ್ಲಿರುವ ಶಕ್ತಿಯನ್ನು ಆವಾಹಿಸುತ್ತಾನೆ. ಕಲಾವತೀ ದೀಕ್ಷೆಯಲ್ಲಿ ಗುರುವು ಶಿಷ್ಯನ ಶರೀರದಲ್ಲಿರುವ ಕಲಾಕೇಂದ್ರಗಳನ್ನು ಅಂದರೆ ಪಂಚಭೂತಗಳ ಶಕ್ತಿಕೇಂದ್ರಗಳನ್ನು ಗುರುತಿಸಿ ಅವುಗಳ ಮೇಲೆ ಧ್ಯಾನ ಮಾಡಿ ನಂತರ ಶಿಷ್ಯನನ್ನು ಪ್ರಚೋದಿಸುತ್ತಾನೆ. ವೇಧಮಯೀ ದೀಕ್ಷೆಯಲ್ಲಿ ಗುರುವು ತನ್ನ ಶಕ್ತಿಯುತ ಯೋಚನಾತರಂಗಗಳಿಂದಲೇ ಶಿಷ್ಯನಿಗೆ ದೀಕ್ಷೆ ನೀಡುತ್ತಾನೆ. ಕೆಲವೊಮ್ಮೆ ಇನ್ನೂ ಮೂರು ದೀಕ್ಷೆಗಳನ್ನು - ಸ್ಪರ್ಶದೀಕ್ಷಾ, ವಾಗ್ದೀಕ್ಷಾ, ದೃಗ್​ದೀಕ್ಷಾ (ಚಾಕ್ಷುಷೀ ದೀಕ್ಷಾ) - ಈ ಪಟ್ಟಿಗೆ ಸೇರಿಸುವುದುಂಟು. ಸ್ಪರ್ಶದೀಕ್ಷೆ ಸ್ಪರ್ಶಮಾತ್ರದಿಂದಲೇ ಶಿಷ್ಯನ ಆಧ್ಯಾತ್ಮಿಕ ಪ್ರಜ್ಞೆಯನ್ನು ಉದ್ದೀಪಿಸುವುದು. ವಾಗ್ದೀಕ್ಷಾ ಮಂತ್ರವನ್ನು ಕಿವಿಯಲ್ಲಿ ಉಸುರಿ ಪ್ರಜ್ಞೆಯನ್ನು ಉನ್ಮೀಲನಗೊಳಿಸುವುದು. ದೃಗ್​ದೀಕ್ಷಾ ನೆಟ್ಟ, ತೀಕ್ಷ್ಣ ನೋಟದಿಂದ ಪ್ರಜ್ಞೆಯನ್ನು ಜಾಗೃತಗೊಳಿಸುವುದು.

ಶಾಸ್ತ್ರೆೊಕ್ತ ದೀಕ್ಷೆಯು ಅನೇಕ ತಂತ್ರೋಕ್ತ ಕ್ರಿಯೆಗಳನ್ನು - ವಾಸ್ತುಪುರುಷ ಪೂಜೆ, ಬಲಿ ಹಾಗೂ ಅಭಿಷೇಕ (ಶಿಷ್ಯನ ಮೇಲೆ ಮಂತ್ರಪೂತ ಜಲವನ್ನು ಸಂಪ್ರೋಕ್ಷಿಸುವುದು) - ಒಳಗೊಂಡಿರುತ್ತದೆ. ದೀಕ್ಷೆಯ ಅತ್ಯಂತ ಸರಳ ರೂಪವೆಂದರೆ, ಉಪದೇಶ - ಮಂತ್ರದಾನ, ನಿಯಮಗಳ ಸೂಚನೆ ಹಾಗೂ ಮಾರ್ಗದರ್ಶನ.

ನಾಳಿನ ಅಂತರಂಗದಲ್ಲಿ: ಪಿ.ಸಿ. ಅಂತೋಣಿಸ್ವಾಮಿ (ಶ್ರೀಸ್ವಾಮಿ), ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net