

ವಿಜಯಪುರ: ಕರೊನಾ ಸೋಂಕಿಗೆ ತುತ್ತಾಗಿದ್ದ ತಾಯಿ ಸಾವನ್ನಪ್ಪಿದ ಎರಡೇ ಗಂಟೆಗಳಲ್ಲಿ ಆಕೆಯ ಮಗನೂ ಸೋಂಕಿಗೆ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಸಿಂದಗಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಮೋಘಿ ಹಿರೇಕುರಬರ (46) ಮತ್ತು ಅವರ ತಾಯಿ ಸಾವಿಗೀಡಾದ ದುರ್ದೈವಿಗಳು. ಅಮೋಘಿ ಹಾಗೂ ಅವರ ತಾಯಿ ನಿಂಗಮ್ಮ ಯಲ್ಲಪ್ಪ ಹಿರೇಕುರಬರ(70) ಅವರಿಗೆ ಕೆಲ ದಿನಗಳ ಹಿಂದೆ ಕರೊನಾ ಸೋಂಕು ದೃಢವಾಗಿತ್ತು. ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಂಗಮ್ಮ ಅವರು ಮಂಗಳವಾರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಉಸಿರು ನಿಲ್ಲಿಸಿದ್ದಾರೆ. ತಾಯಿ ಸತ್ತ ಎರಡು ಗಂಟೆಗಳಲ್ಲಿ ಅಂದರೆ ಸಂಜೆ 5 ಗಂಟೆಗೆ ಅಮೋಘಿ ಅವರೂ ಕೊನೆ ಉಸಿರೆಳೆದಿದ್ದಾರೆ.
ಅಮೋಘಿ ಅವರ ಕುಟುಂಬ ಒಂದೇ ದಿನದಲ್ಲಿ ಇಬ್ಬರು ಸದಸ್ಯರನ್ನು ಕಳೆದುಕೊಂಡಿದ್ದು, ಇಡೀ ಕುಟುಂಬದಲ್ಲಿ ನೀರವ ಮೌನ ಆವರಿಸಿಕೊಂಡಿದೆ.