ಕೆರೆಗೆ ನೀರು ತುಂಬುವ ಯೋಜನೆ ತಂದ ಕಲಹ !

Yashwantraygouda
Published on

ಪರಶುರಾಮ ಭಾಸಗಿ
ವಿಜಯಪುರ:
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಇಂಡಿ ತಾಲೂಕಿನ 16 ಕೆರೆಗೆ ನೀರು ತುಂಬುವ ಯೋಜನೆಯೇ ಕಾಂಗ್ರೆಸ್ ಶಾಸಕರ ಜಟಾಪಟಿಗೆ ಕಾರಣವಾಯಿತೇ?

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಬಬಲೇಶ್ವರ ಶಾಸಕ, ಜಲಸಂಪನ್ಮೂಲ ಮಾಜಿ ಸಚಿವ ಎಂ.ಬಿ. ಪಾಟೀಲರ ನಡುವಿನ ಶೀತಲ ಸಮರ ದಿನಕ್ಕೊಂದು ಸ್ವರೂಪ ಪಡೆಯುತ್ತಿದ್ದು, ಅಸಲು ಈ ಸಮರಕ್ಕೆ ಕಾರಣ ಹುಡುಕುತ್ತ ಹೋದಾಗ ಸಿಕ್ಕ ಉತ್ತರವೇ ಈ ಕೆರೆಗೆ ನೀರು ತುಂಬುವ ಯೋಜನೆ.

ಯಾವಾಗ ಯಾವಾಗ ಇಂಡಿ ತಾಲೂಕಿನ ಕೆರೆಗೆ ನೀರು ತುಂಬುವ ಯೋಜನೆ ಬಗ್ಗೆ ಎಂ.ಬಿ. ಪಾಟೀಲ ಉಚ್ಚರಿಸುತ್ತಾರೋ ಆವಾಗ ಆವಾಗ ಯಶವಂತರಾಯಗೌಡ ಪಾಟೀಲ ಎಂ.ಬಿ. ಪಾಟೀಲರ ಹೊಂದಾಣಿಕೆ ರಾಜಕಾರಣ, ಅನ್ಯಕ್ಷೇತ್ರದಲ್ಲಿನ ಹಸ್ತಕ್ಷೇಪದ ಬಗ್ಗೆ ಪುನರುಚ್ಚರಿಸುತ್ತಾ ಬಂದಿದ್ದು ಗಮನಾರ್ಹ.

ಕಳೆದ 2020ರಲ್ಲೂ ಈ ಸಮರ ಸದ್ದು ಮಾಡಿತ್ತು. ಏ. 24, 2020 ರಂದು ನಾಗಠಾಣ ವಿಧಾನ ಸಭೆ ಕ್ಷೇತ್ರದ ಬುರಾಣಪುರ ಬಳಿ ತಿಡಗುಂದಿ ಶಾಖಾ ಕಾಲುವೆಗೆ ವಿಶೇಷ ಪೂಜೆ ನೆರವೇರಿಸಿದ ಸಂದರ್ಭದಲ್ಲೂ ಇದೇ ಸಮರ ಶುರುವಾಗಿತ್ತು. ಲಾಕ್‌ಡೌನ್ ಮಧ್ಯೆಯೂ ಪಕ್ಷಾತೀತವಾಗಿ ಬಾಗಿನ ಅರ್ಪಿಸಿ ಕರೊನಾ ನಿಯಮ ಉಲ್ಲಂಘಿಸಿದ ಶಾಸಕತ್ರಯರ ಮೇಲೆ ಯಶವಂತರಾಯಗೌಡ ಪಾಟೀಲ ಕಿಡಿಕಾರಿದ್ದರು. ಪ್ರಕರಣ ಕೆಬಿಜೆಎನ್‌ಎಲ್ ಅಧಿಕಾರಿ ಬುಡಕ್ಕೂ ನೀರು ತಂದಿರುವುದು ಬೇರೆ ವಿಚಾರ. ಆದರೆ, ಪಾಟೀಲದ್ವಯರ ಕಾಳಗಕ್ಕೆ ಇದುವೇ ಕಾರಣವಾಗಿತ್ತು. ಇದೀಗ ಡೊಮನಾಳ ಕೆರೆಗೆ ಬಾಗಿನ ಅರ್ಪಿಸಿ ಮತ್ತದೇ ಇಂಡಿ ತಾಲೂಕಿನ ಕೆರೆಗೆ ನೀರು ತುಂಬುವ ಯೋಜನೆ ಬಗ್ಗೆ ಮಾತನಾಡಿದ್ದು ಸಮರಕ್ಕೆ ಕಾರಣ ಎನ್ನಲಾಗಿದೆ.

ಯೋಜನೆ ಏನು?
ಇಂಡಿ ತಾಲೂಕಿನ ಜಿಗಜೇವಣಿ, ಇಂಚಗೇರಿ-1, ಇಂಚಗೇರಿ-2, ದೇಗಿನಾಳ-1, ದೇಗಿನಾಳ-2, ಬಬಲಾದ, ಕೂಡಗಿ, ಸೊನಕನಹಳ್ಳಿ, ಗುಂದವಾನ, ಕೊಳೂರಗಿ, ಸಾವಳಸಂಗ, ಹಳಗುಣಕಿ, ಹಡಲಸಂಗ, ನಂದರಗಿ, ಸಾತಲಗಾಂವ, ಹೊರ್ತಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೇ ಪಾಟೀಲದ್ವಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣ.
ಜೂ. 9, 2021ರಂದು ಅಂದಿನ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು ಸಹ ಸಮರಕ್ಕೆ ಕಾರಣವಾಯಿತು. ಎಂ.ಬಿ. ಪಾಟೀಲ ನನ್ನಿಂದಲೇ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎನ್ನುತ್ತಿದ್ದಂತೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಯಿತು.

ಬೆಂಬಲಕ್ಕೆ ನಿಂತಿದ್ದ ಹಾಲಿ-ಮಾಜಿ ಶಾಸಕರು
ಏಪ್ರೀಲ್ 2020ರಲ್ಲಿ ಶಾಸಕ ಶಿವಾನಂದ ಪಾಟೀಲ ಯಶವಂತರಾಯಗೌಡ ಪಾಟೀಲ ಪರ ಬ್ಯಾಟಿಂಗ್ ಮಾಡಿದ್ದರೆ ಇಂಡಿಯ ಮಾಜಿ ಶಾಸಕ ಸಾರ್ವಭೌಮ ಬಗಲಿ ಎಂ.ಬಿ. ಪಾಟೀಲರ ಪರ ಹೇಳಿಕೆ ನೀಡಿದ್ದರು. ಅಲ್ಲದೆ, ಎಂ.ಬಿ. ಪಾಟೀಲರ ಕೆಲವು ಹಿಂಬಾಲಕರು ಹೇಳಿಕೆ ನೀಡಿದಾಗ ಶಿವಾನಂದ ಪಾಟೀಲರು ಚೇಲಾಗಳು-ಬಾಲಬುಡುಕರಿಂದ ಹೇಳಿಕೆ ಕೊಡಿಸುವುದು ಸಣ್ಣತನದ ರಾಜಕಾರಣ ಎಂದಿದ್ದರು. ಮುಂದುವರಿದು ಎಂ.ಬಿ. ಪಾಟೀಲರು ಪುಸ್ತಕ ಬರೆದರೆ ನಾನು ಡಿಕ್ಶನರಿ ಬರೆಯುವುದಾಗಿ ಶಿವಾನಂದ ಪಾಟೀಲ ಟಾಂಗ್ ನೀಡಿದ್ದರು. ಅಂದರೆ ಅಷ್ಟರ ಮಟ್ಟಿಗೆ ವಿಷಯ ತಾರಕಕ್ಕೇರಿತ್ತು. ಇದೀಗ ಮತ್ತದೇ ಸನ್ನಿವೇಶ ಪುನರಾವರ್ತನೆಯಾಗಿದ್ದು ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ.

ಶಾಸಕರ ವಾದವೇನು?
ಈ ಯೋಜನೆ ರೂಪಿಸಿದ್ದೇ ನಾನು, ಇದು ನನ್ನ ಕನಸು, ನನ್ನಿಂದಲೇ ಈ ಯೋಜನೆ ರೂಪುಗೊಂಡಿದೆ ಎಂಬುದು ಎಂ.ಬಿ. ಪಾಟೀಲರ ಹೇಳಿಕೆ. ಆದರೆ, ಈ ಯೋಜನೆಯಲ್ಲಿ ನಮ್ಮದೂ ಪಾತ್ರವಿದೆ. ನನ್ನ ಮನವಿ ಮೇರೆಗೆ ಸಿದ್ದರಾಮಯ್ಯ ಈ ಯೋಜನೆ ರೂಪಿಸಿದ್ದಾರೆ ಎಂಬುದು ಶಾಸಕ ಯಶವಂತರಾಯಗೌಡ ಪಾಟೀಲರ ವಾದ. ಕೇವಲ ಇಂಡಿ ಕೆರೆಗಳು ಮಾತ್ರವಲ್ಲ ಇಡೀ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ನಮ್ಮ ಸಹಕಾರ ಇಲ್ಲದಿಲ್ಲ. ಕೇವಲ ನಾನು, ನನ್ನಿಂದ, ನಾನೇ ಎಂಬ ಅಂಹಕಾರದ ಮಾತು ಬಿಡಬೇಕೆಂಬುದು ಯಶವಂತರಾಯಗೌಡರ ಹೇಳಿಕೆ.

ಹಾಗಾದರೆ ತಪ್ಪು ಯಾರದು?
ಅಂತಿಮವಾಗಿ ಇದರಲ್ಲಿ ಯಾರದು ತಪ್ಪು? ಯಾರದು ಸರಿ? ಎಂಬ ತೀರ್ಮಾನಕ್ಕೆ ಬರುವುದಾದರೆ ಇಬ್ಬರಲ್ಲೂ ಸರಿ, ತಪ್ಪು ಕಾಣದೇ ಇರದು. ಯೋಜನೆ ರೂಪಿಸಿದ್ದು ಎಂ.ಬಿ. ಪಾಟೀಲರೇ ಆದರೂ ಸರ್ಕಾರದ ಭಾಗವಾಗಿ ಆ ಕ್ಷೇತ್ರದ ಶಾಸಕರ ಪಾತ್ರವೂ ಇರಲಿದೆ. ಅಷ್ಟಕ್ಕೂ ಕೆರೆಗೆ ನೀರು ತುಂಬುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದಕ್ಕಾಗಲಿ, ಎಂ.ಬಿ. ಪಾಟೀಲರು ಕೆರೆಗೆ ನೀರು ತುಂಬಿಸುವ ಯೋಜನೆ ರೂಪಿಸಿದ್ದಕ್ಕಾಗಲಿ ಯಶವಂತರಾಯಗೌಡರ ಸಿಟ್ಟಿಲ್ಲ. ಆ ಬಗ್ಗೆ ವಿರೋಧವೂ ಇಲ್ಲ. ಎಂ.ಬಿ. ಪಾಟೀಲರ ನಡೆ ಹಾಗೂ ವಿಧಾನದಲ್ಲಿ ತಪ್ಪಿದೆ ಎನ್ನುತ್ತಾರವರು. ಪದೇ ಪದೇ ನಡುವಳಿಕೆ ಬದಲು ಮಾಡಿಕೊಳ್ಳಿ ಎಂದು ಹೇಳುತ್ತಿರುವುದು ಅದೇ ಕಾರಣಕ್ಕಾಗಿ. ಹಾಗಾದರೆ, ಎಂ.ಬಿ. ಪಾಟೀಲರು ಈ ವಿಷಯದ ಬಗ್ಗೆ ಮಾತನಾಡುವುದು ನಿಲ್ಲಿಸುತ್ತಾರೆಯೇ? ಹಾಗೆ ಮಾಡಿದರೆ ಸಮರ ಸಂಪನ್ನಗೊಳ್ಳುವುದೇ? ಯಶವಂತರಾಯಗೌಡರ ಅಂತಿಮ ನಿರ್ಧಾರ ಏನು? ಎಂಬುದು ಕಾದು ನೋಡಬೇಕಿದೆ.

ನಾನು ಧಾರವಾಡದಲ್ಲಿದ್ದೇನೆ. ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಯಾರೋ ಫೋನ್ ಮುಖಾಂತರ ತಿಳಿಸಿದರು. ಪರಸ್ಪರ ಕೂತು ಮಾತನಾಡಿದಾಗಲೇ ಸ್ಪಷ್ಟತೆ ತಿಳಿಯಲಿದೆ. ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ.
ರಾಜು ಆಲಗೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net