

ಬೆಂಗಳೂರು: ಬಹುನಿರೀಕ್ಷಿತ ‘ವಿಜಯಾನಂದ’ಚಿತ್ರದ ಟೀಸರ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಟೀಸರ್ ನೋಡಿ ಜನ ಮೆಚ್ಚಿಕೊಂಡಿದ್ದು, ಯೂಟ್ಯೂಬ್ನಲ್ಲಿ ಬಿಡುಗಡೆಯಾದ ಐದು ದಿನಗಳಲ್ಲೇ 1.35 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ.
ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜನ್ಮದಿನದ ಪ್ರಯುಕ್ತ ಆಗಸ್ಟ್ 2ರಂದು ‘ವಿಜಯಾನಂದ’ ಚಿತ್ರದ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿತ್ತು. ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನಾಧರಿಸಿ ತಯಾರಾಗುತ್ತಿರುವ ‘ವಿಜಯಾನಂದ’ ಚಿತ್ರವನ್ನು ‘ಟ್ರಂಕ್’ ಖ್ಯಾತಿಯ ರಿಷಿಕಾ ಶರ್ಮಾ ನಿರ್ದೇಶಿಸುತ್ತಿದ್ದಾರೆ. ನಟ ನಿಹಾಲ್, ಡಾ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ನಟಿಸಿದ್ದು, ಅವರ ತಂದೆ ಬಿ.ಜಿ. ಸಂಕೇಶ್ವರ ಅವರ ಪಾತ್ರದಲ್ಲಿ ಅನಂತ್ ನಾಗ್ ನಟಿಸಿದ್ದಾರೆ. ವಿಜಯ ಸಂಕೇಶ್ವರ ಅವರ ಮಾರ್ಗದರ್ಶಕರಾಗಿ ರವಿಚಂದ್ರನ್ ಅವರ ಪಾತ್ರಗಳು ಟೀಸರ್ನಲ್ಲಿ ಗಮನ ಸೆಳೆಯುತ್ತವೆ.
ಸದ್ಯ ಕನ್ನಡದಲ್ಲಿ 52 ಲಕ್ಷಕ್ಕೂ ಹೆಚ್ಚು ಮಂದಿ ಟೀಸರ್ ವೀಕ್ಷಿಸಿದ್ದು. ತೆಲುಗಿನಲ್ಲಿ 30 ಲಕ್ಷ, ತಮಿಳಿನಲ್ಲಿ 24 ಲಕ್ಷ ಹಾಗೂ ಮಲಯಾಳಂನಲ್ಲಿ 27 ಲಕ್ಷಕ್ಕೂ ಹೆಚ್ಚು ಮಂದಿ ಟೀಸರ್ ವೀಕ್ಷಿಸಿದ್ದಾರೆ. ನಾಲ್ಕೂ ಭಾಷೆಗಳಿಂದ ಬರೋಬ್ಬರಿ 1.92 ಲಕ್ಷ ಮಂದಿ ಲೈಕ್ ಮಾಡಿರುವುದು ವಿಶೇಷ. ವಿಆರ್ಎಲ್ ಪ್ರೊಡಕ್ಷನ್ಸ್ ನಡಿ ಡಾ. ಆನಂದ ಸಂಕೇಶ್ವರ ಅವರು ನಿರ್ವಿುಸುತ್ತಿರುವ ‘ವಿಜಯಾನಂದ’ ಚಿತ್ರದಲ್ಲಿ ನಿಹಾಲ್, ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಸಿರಿ ಪ್ರಹ್ಲಾದ್ ಮುಂತಾದವರು ನಟಿಸಿದ್ದು, ಗೋಪಿಸುಂದರ್ ಸಂಗೀತ ಸಂಯೋಜಿಸಿದ್ದಾರೆ.