

ವಿಜಯನಗರ: ಕಾಲೇಜಿನ ಬಳಿ ಬಸ್ ನಿಲ್ಲಿಸದಿದ್ದಕ್ಕೆ ಬಸ್ನಿಂದ ಹೊರಗೆ ಜಿಗಿದ್ದಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಮೃತ ವಿದ್ಯಾರ್ಥಿನಿಯನ್ನು ಶ್ವೇತಾ ಎಂದು ಗುರುತಿಸಲಾಗಿದೆ. ಶ್ವೇತಾ ಹೂವಿನಹಡಗಲಿಯ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು.
ಕಾಲೇಜು ಬಳಿಯ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸದಿದ್ದಕ್ಕೆ ಶ್ವೇತಾ ಬಸ್ನಿಂದ ಜಿಗಿದಿದ್ದಳು. ನಿನ್ನೆ (ಏ.12) ಮಧ್ಯಾಹ್ನ ಹಡಗಲಿಯಿಂದ ರಾಣೆಬೆನ್ನೂರಿಗೆ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್ನಲ್ಲಿ ಘಟನೆ ನಡೆದಿತ್ತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶ್ವೇತಾ ಮೃತಪಟ್ಟಿದ್ದಾಳೆ.
ಹಡಗಲಿ ಪಟ್ಟಣದ ಬಿಸಿಎಂ ಹಾಸ್ಟೆಲ್ ಶ್ವೇತಾ ವಾಸವಿದ್ದಳು. ಶ್ವೇತಾಳ ಸಾವಿನಿಂದ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಹಡಗಲಿ ಪೊಲೀಸರ ಭೇಟಿ ನೀಡಿ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದ್ದಾರೆ.
ಘಟನೆ ಬಳಿಕ ಸಾರಿಗೆ ಬಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್)