ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್​ಗೆ ಹೋದ್ರೆ ನನ್ನ ತಾಯಿಗೆ ದ್ರೋಹ ಮಾಡಿದಂತೆ! ಸಚಿವ ಆನಂದ್​ ಸಿಂಗ್​ ಹೇಳಿಕೆ

Anand Singh
Published on

ವಿಜಯನಗರ: ಸಚಿವ ಆನಂದ್​ ಸಿಂಗ್​ ಕಾಂಗ್ರೆಸ್​ನಿಂದ ಸ್ಪರ್ಧಿಸಲು ಮುಂದಾಗಿದ್ದು, ಟಿಕೆಟ್​ಗಾಗಿ ಲಾಬಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಆನಂದ್​ ಸಿಂಗ್​, ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದಿದ್ದಾರೆ.

ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿಗಳಿಗೆ ಅಡ್ಡಿಯಾಗುವುದಿಲ್ಲ. ಯಾರಾದ್ರೂ ಕಾಂಗ್ರೆಸ್ ಟಿಕೆಟ್ ಪಡೆದುಕೊಳ್ಳಬಹುದು. ನಾನು ಕಾಂಗ್ರೆಸ್ ಟಿಕೆಟ್​ಗೆ ಪ್ರಯತ್ನ ಮಾಡುತ್ತಿದ್ದೇನೆ ಅಂತ ಹೇಳುವುದಾದರೆ, ಅದೊಂದು ಊಹಾಪೋಹವಷ್ಟೇ ಎಂದು ಹೇಳಿದರು.

ನಾನು ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್​ಗೆ ಹೋದರೆ, ನನ್ನ ತಾಯಿಗೆ ನಾನು ದ್ರೋಹ ಮಾಡಿದಂತೆ! ನನ್ನ ಹೆಸರನ್ನು ಇತಿಹಾಸ ಪುಟದಲ್ಲಿ ಸೇರುವಂತೆ ಮಾಡಿರುವ ಬಿಜೆಪಿ ಮತ್ತು ಯಡಿಯೂರಪ್ಪ ಅವರಿಗೆ ನಾನು ದ್ರೋಹ ಮಾಡಿದಂತಾಗುತ್ತದೆ. ನಾನು ಬಿಜೆಪಿ ಬಿಟ್ಟು ಹೋಗಿದ್ದೇನೆ ಅಂದ್ರೆ ನನ್ನ ತಾಯಿಯು ಕೂಡ ನನಗೆ ಮುಖದ ಮೇಲೆ ಥೂ ಅಂತಾ ಉಗಿಯುತ್ತಾಳೆ ಎಂದರು.

ನಾನು ಬಿಜೆಪಿ ಪಕ್ಷದಲ್ಲೇ ಮುಂದುವರೆಯುತ್ತೇನೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್​ಗೆ ಹೋಗುವುದಿಲ್ಲ. ಕಾಂಗ್ರೆಸ್ ಟಿಕೆಟ್ ಪಡೆಯುವವರು ಧಾರಾಳವಾಗಿ ಪಡೆದುಕೊಳ್ಳಲಿ ಎಂದು ಸಚಿವ ಆನಂದ್ ಸಿಂಗ್ ಟಕ್ಕರ್​ ಕೊಟ್ಟರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net