ವಿಜಯ್ ವಾಹನದಲ್ಲೇ ಉಳಿದಿದ್ದರಿಂದ ಕಾಲ್ತುಳಿತ

Tvk Vijay
Published on

ಚೆನ್ನೈ: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ಮತ್ತು ನಟ ವಿಜಯ್ ಇತ್ತೀಚೆಗೆ ಕರೂರ್​ಗೆ ಆಗಮಿಸಿದ ವೇಳೆ ತಮ್ಮ ವಾಹನದಿಂದ ಹೊರಬರದಿದ್ದರಿಂದ ಜನರಲ್ಲಿ ಅಶಾಂತಿ ಮತ್ತು ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಇದರಿಂದಾಗಿ 41 ಜನರು ಮೃತಪಟ್ಟು 60 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಎಫ್​ಐಆರ್​ನಲ್ಲಿ ದಾಖಲಿಸಿದ್ದಾರೆ.

ಪೊಲೀಸರು ಎಫ್​ಐಆರ್​ನಲ್ಲಿ ವಿಜಯ್ ಹೆಸರು ನಮೂದಿಸಿಲ್ಲ, ಆದರೆ ಟಿವಿಕೆ ಪಕ್ಷದ ಮೂವರು ಪ್ರಮುಖ ಕಾರ್ಯಕರ್ತರಾದ ಕರೂರ್ ಉತ್ತರ ಜಿಲ್ಲಾ ಕಾರ್ಯದರ್ಶಿ ಮಥಿಯಜಗನ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸ್ಸಿ ಆನಂದ್ ಮತ್ತು ಟಿವಿಕೆ ಉಪ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105, 110, 125 ಮತ್ತು 223 ಹಾಗೂ ತಮಿಳುನಾಡು ಸಾರ್ವಜನಿಕ ಆಸ್ತಿ (ಹಾನಿ ಮತ್ತು ನಷ್ಟ ತಡೆಗಟ್ಟುವುದು) ಕಾಯ್ದೆಯ ಸೆಕ್ಷನ್ 3ರ ಅಡಿ ಎಫ್​ಐಆರ್ ದಾಖಲಿಸಿದ್ದಾರೆ.ವೇಲುಸಾಮಿಪುರಂಗೆ ವಿಜಯ್ ಆಗಮಿಸಿದ ಬಳಿಕ ತಮ್ಮ ಪ್ರಚಾರ ವಾಹನದೊಳಗೆ ದೀರ್ಘಕಾಲದವರೆಗೆ ಇದ್ದರು, ಅವರು ಹೊರಬರದ್ದರಿಂದ ನೆರೆದಿದ್ದ ಜನರಲ್ಲಿ ಅಶಾಂತಿ ಉಂಟಾಯಿತು.

ನೆಚ್ಚಿನ ನಟನನ್ನು ಹತ್ತಿರದಿಂದ ನೋಡಲು ಜನರು ವಾಹನದ ಸಮೀಪ ತೆರಳಲು ಪ್ರಯತ್ನಿಸಿದರು. ಸ್ಥಳದಲ್ಲಿ ರಸ್ತೆ ಕಿರಿದಾಗಿದ್ದರಿಂದ ಹೆಚ್ಚು ಜನಸಂದಣೆ ಉಂಟಾಗಿತ್ತು. ಇದೇ ವೇಳೆ ವಿಜಯ್ರನ್ನು ನೋಡಲು ಅಭಿಮಾನಿಗಳು ರಸ್ತೆ ಬದಿಯ ಶೆಡ್​ಗಳು ಮತ್ತು ಮರಗಳ ಮೇಲೆ ಹತ್ತಿದ್ದರು. ಅವುಗಳೂ ಕುಸಿದು ಜನರ ಮೇಲೆ ಬಿದ್ದ ಪರಿಣಾಮ ಕಾಲ್ತುಳಿತ ಸಂಭವಿಸಿದೆ ಎಂದು ಎಫ್​ಐಆರ್​ನಲ್ಲಿ ತಿಳಿಸಲಾಗಿದೆ. ವಿಜಯ್ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿಯಾಗಲು ಯೋಜಿಸಿದ್ದರು. ಆದರೆ ಆಸ್ಪತ್ರೆಗೆ ಭೇಟಿ ನೀಡಿದರೆ ಅಲ್ಲಿ ಜನಸಂದಣೆ ಮತ್ತಷ್ಟು ಹೆಚ್ಚಿ ಅವಘಡಗಳು ಉಂಟಾಗಬಹುದು ಎಂಬ ಕಾರಣದಿಂದ ಅವರು ಕರೂರ್​ನಿಂದ ತೆರಳಿದ್ದರು ಎಂದು ಟಿವಿಕೆ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಎನ್​ಡಿಎನಿಂದ ಸತ್ಯಶೋಧನಾ ಸಮಿತಿ

ಕರೂರ್ ಕಾಲ್ತುಳಿತ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೆ ಹೇಮಾ ಮಾಲಿನಿ ನೇತೃತ್ವದಲ್ಲಿ ಎಂಟು ಸದಸ್ಯರ ಎನ್​ಡಿಎ ಸತ್ಯಶೋಧನಾ ಸಮಿತಿ ರಚಿಸಿದೆ. ಬಿಜೆಪಿ ಸಂಸದರಾದ ಅನುರಾಗ್ ಠಾಕೂರ್, ತೇಜಸ್ವಿ ಸೂರ್ಯ, ಬ್ರಜ್ ಲಾಲ್, ಅಪರಾಜಿತಾ ಸಾರಂಗಿ, ರೇಖಾ ಶರ್ವ, ಟಿಡಿಪಿ ಸಂಸದ ಪುಟ್ಟ ಮಹೇಶ್ ಕುಮಾರ್ ಹಾಗೂ ಶಿವಸೇನೆ ಸಂಸದ ಶ್ರೀಕಾಂತ್ ಶಿಂಧೆ ಈ ಸತ್ಯಶೋಧನಾ ಸಮಿತಿ ಸದಸ್ಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net