ಟೊಮ್ಯಾಟೋ ತಮನ್ನಾ: ಶುಭಾಶಯ ತಿಳಿಸಿದ ಗೆಳತಿಯ ಕಾಲೆಳೆದ ವಿಜಯ್ ವರ್ಮಾ

Thamanna Bhatiya
Published on

ಹೊಸ ವರ್ಷದಿಂದ ಬಾಲಿವುಡ್ ಅಂಗಳದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅದು ನಟಿ ತಮನ್ನಾ ಮತ್ತು ನಟ ವಿಜಯ್ ವರ್ಮಾ ಅವರಿಗೆ ಸಂಬಂಧಿಸಿದ್ದು. 2023ರ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಗೋವಾದಲ್ಲಿ ನಡೆದ ಪಾರ್ಟಿಯೊಂದರಲ್ಲಿ ಅವರಿಬ್ಬರೂ ಅಪ್ಪಿಕೊಂಡಿರುವ ಫೋಟೋ ವೈರಲ್ ಆಗಿತ್ತು. ಅವರಿಬ್ಬರೂ ಸ್ನೇಹಿತರಾ? ಪ್ರೇಮಿಗಳಾ? ಎಂಬ ಪ್ರಶ್ನೆ ಹರಿದಾಡಿತ್ತು. ಆ ಬಳಿಕ ಇಬ್ಬರೂ ಕೆಲವು ಬಾರಿ ಜೊತೆಯಲ್ಲೇ ವಿಮಾನ ನಿಲ್ದಾಣ, ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ವಿಜಯ್ ವರ್ಮಾ, ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಜರ್ಮನಿಯಲ್ಲಿದ್ದಾರೆ. ಅಲ್ಲಿ ಅವರು ನಟಿಸಿರುವ ‘ದಹಾಡ್’ ವೆಬ್​ಸರಣಿಯ ಪ್ರೀಮಿಯರ್ ಆಗಲಿದೆ. ಚಿತ್ರೋತ್ಸವದ ರೆಡ್​ಕಾರ್ಪೆಟ್​ನಲ್ಲಿ ವಿಜಯ್ ತಮ್ಮ ವೆಬ್ ಸರಣಿ ತಂಡದ ಜತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ತಮನ್ನಾ, ಇಡೀ ‘ದಹಾಡ್’ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಅದಕ್ಕೆ ಉತ್ತರಿಸಿರುವ ವಿಜಯ್, ‘ಧನ್ಯವಾದಗಳು ಟೊಮ್ಯಾಟೋ’ ಎಂದು ಟೊಮ್ಯಾಟೋ ಹಾಗೂ ಪಿಂಕ್ ಹೂವಿನ ಎಮೊಜಿಗಳನ್ನು ಹಾಕಿದ್ದಾರೆ. ಈ ಮೂಲಕ ತಮನ್ನಾ ಅವರನ್ನು ತಾವು ಟೊಮ್ಯಾಟೋ ಎಂಬ ಅಡ್ಡ ಹೆಸರಿನಿಂದ ಕರೆಯುವ ಸೂಚನೆಯನ್ನು ನೀಡಿದ್ದಾರೆ.

ಸದ್ಯ, ವಿಜಯ್ ಮತ್ತು ತಮನ್ನಾರ ಈ ಸೋಷಿಯಲ್ ಮೀಡಿಯಾ ಪೋಸ್ಟ್​ಗಳು ವೈರಲ್ ಆಗಿವೆ. ಸದ್ಯ ತಮನ್ನಾ, ಚಿರಂಜೀವಿ ನಾಯಕನಾಗಿರುವ ‘ಭೋಲಾ ಶಂಕರ್’ ಹಾಗೂ ರಜಿನಿಕಾಂತ್ ನಟಿಸುತ್ತಿರುವ ‘ಜೈಲರ್’ ಚಿತ್ರಗಳಲ್ಲಿ ನಟಿಸುತ್ತಿದ್ದು, ಜತೆಗೆ ಹಿಂದಿ ಸಿನಿಮಾ ‘ಬೋಲೆ ಚೂಡಿಯಾ’ ಹಾಗೂ ಮಲಯಾಳಂನ ‘ಬಾಂದ್ರಾ’ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net