

Vijay Sethupathi: ಭಾರತೀಯ ಚಿತ್ರರಂಗದಲ್ಲಿ ತನ್ನದೇ ವಿಶೇಷ ಅಭಿಮಾನಿಗಳ ಬಳಗವನ್ನು ಹೊಂದಿರುವ ವಿಜಯ್ ಸೇತುಪತಿ, ಸಿನಿಪ್ರೇಕ್ಷಕರು ಅತಿಯಾಗಿ ಇಷ್ಟಪಡುವ ಸ್ಟಾರ್ ನಟರಲ್ಲಿ ಒಬ್ಬರು. ಯಾವುದೇ ಕಥಾಹಂದರವಿರಲಿ, ಎಂತಹ ಪಾತ್ರವಿರಲಿ, ಕೊಟ್ಟ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡುವ ಸೇತುಪತಿ, ಅದ್ಭುತ ನಟನೆಯಿಂದಲೇ ನೋಡುಗರ ಮನಗೆಲ್ಲುತ್ತಾರೆ. ಸರಳ ಅಭಿನಯ, ಪಾತ್ರ ಹಾಗೂ ಕಥೆಯ ಆಯ್ಕೆಯಲ್ಲೇ ಮೊದಲ ಗೆಲುವು ನೋಡುವ ವಿಜಯ್, ಸಿನಿಮಾ ರಿಲೀಸ್ ಆದ ನಂತರ ಅಭಿಮಾನಿಗಳ ಖುಷಿ, ಪ್ರಶಂಸೆಗಳನ್ನು ಪಡೆಯುವ ಮುಖೇನ ದೊಡ್ಡ ಗೆಲುವನ್ನು ಸಾಧಿಸುತ್ತಾರೆ. ಈ ವಿಷಯದಲ್ಲಿ ಅವರು ಸದಾ ಮುಂಚೂಣಿ.
ತಮ್ಮ ಹೊಸ ಚಿತ್ರದ ಆಯ್ಕೆ ಕುರಿತು ಇತ್ತೀಚಿನ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ ಸೇತುಪತಿ, ಮುಂಬರುವ ಆ್ಯಕ್ಷನ್ ಕಥಾಹಂದರ ಚಿತ್ರವನ್ನು ನಿರ್ದೇಶಕ ಪುರಿ ಜಗನ್ನಾಥ್ ಅವರೊಂದಿಗೆ ಮಾಡುತ್ತಿರುವುದಾಗಿ ಬಹಿರಂಗಪಡಿಸಿದರು. ಸರಣಿ ಸೋಲುಗಳಿಂದ ಕಂಗಾಲಾಗಿರುವ ನಿರ್ದೇಶಕನ ಜತೆಗೆ ಕೈಜೋಡಿಸಿರುವ ವಿಜಯ್, ಪುರಿ ಜಗನ್ನಾಥ್ಗೆ ಹಿಟ್ ಚಿತ್ರವನ್ನು ಕೊಡುವ ಭರವಸೆಯನ್ನು ಪರೋಕ್ಷವಾಗಿ ನೀಡಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.
ತಮ್ಮ ಮುಂಬರುವ ಬಹುನಿರೀಕ್ಷಿತ ಪ್ರಾಜೆಕ್ಟ್ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡ ವಿಜಯ್ ಸೇತುಪತಿ, “ನನ್ನ ನಿರ್ದೇಶಕರನ್ನು ಅವರ ಹಿಂದಿನ ಕಥೆ-ವ್ಯಥೆಗಳಿಂದ ನಾನು ಅಳೆಯುವುದಿಲ್ಲ. ಅವರ ಹಿನ್ನೆಲೆ ನೋಡಿ ಅವರೊಂದಿಗೆ ಕೈಜೋಡಿಸುವ ಅಭ್ಯಾಸ ನನಗಿಲ್ಲ. ನನಗೆ ಯಾವುದಾದರೂ ಒಂದು ಕಥೆ ಇಷ್ಟವಾದರೆ, ಖಂಡಿತ ನಾನು ಅದನ್ನು ಮಾಡುತ್ತೇನೆ. ಅದಕ್ಕೆ ಒಪ್ಪಿಗೆ ಸೂಚಿಸುತ್ತೇನೆ. ಪುರಿ ಅವರ ವಿಷಯದಲ್ಲಿಯೂ ಇದೇ ಆಗಿದ್ದು" ಎಂದರು.
"ಚಿತ್ರದ ಕಥೆಯನ್ನು ಅವರು ವಿವರಿಸಿದ ರೀತಿ ನನಗೆ ಬಹಳ ಇಷ್ಟವಾಯಿತು. ಇದು ಪೂರ್ಣ ಪ್ರಮಾಣದ ಆ್ಯಕ್ಷನ್ ಸಿನಿಮಾ. ಅಸಲಿಗೆ ಇಲ್ಲಿಯವರೆಗೆ ನಾನು ಮಾಡಿರದ ಪಾತ್ರ. ಹಿಂದಿನಕ್ಕಿಂತ ಹೊಸತನ್ನು ಕೊಡುವ ಹಂಬಲದಲ್ಲೇ ಈ ಚಿತ್ರವನ್ನು ಎದುರುನೋಡುತ್ತಿದ್ದೇನೆ. ಈ ಸಿನಿಮಾದಲ್ಲಿ ಪ್ರತಿಭಾವಂತ ನಟಿ ಟಬು ಅವರಿದ್ದಾರೆ. ಅವರ ಜತೆಗೆ ಇಲ್ಲಿಯವರೆಗೂ ನಾನು ತೆರೆ ಹಂಚಿಕೊಂಡಿಲ್ಲ. ನಟಿಸುವ ಉತ್ಸಾಹ ಹೆಚ್ಚಿದೆ" ಎಂದು ಹೇಳಿದರು. ವಿಜಯ್ ಸೇತುಪತಿ ಒಪ್ಪಿಕೊಂಡ ಖುಷಿಯಲ್ಲಿರುವ ನಿರ್ದೇಶಕ ಪುರಿ ಜಗನ್ನಾಥ್, ಪುರಿ ಕನೆಕ್ಟ್ಸ್ ಬ್ಯಾನರ್‌ನಡಿ ನಟಿ ಚಾರ್ಮಿ ಅವರೊಂದಿಗೆ ಸಿನಿಮಾವನ್ನು ನಿರ್ಮಿಸಲಿದ್ದಾರೆ,(ಏಜೆನ್ಸೀಸ್).