13 ಕಡೆ ಮೂಳೆ ಮುರಿತ! 17 ದಿನ ಆಸ್ಪತ್ರೆ ಹಾಸಿಗೆಯಲ್ಲಿ... ಅದೊಂದು ಕಾರಣಕ್ಕೆ ಪ್ರಿಯಕರನನ್ನು ಹಿಗ್ಗಾಮುಗ್ಗಾ ಥಳಿಸಿದ ಪ್ರೇಯಸಿ | Boyfriend

ವಿಜಯವಾಣಿ (9)
Published on

Boyfriend: ಪ್ರೇಯಸಿಯೇ ತನ್ನ ದೇಹದ ಮೂಳೆಗಳನ್ನು ಮುರಿಯುತ್ತಾಳೆ ಎಂದು ಕನಸ್ಸಿನಲ್ಲಿಯೂ ಯೋಚಿಸದ ಪ್ರಿಯಕರನಿಗೆ ಅಚ್ಚರಿ, ಆಘಾತ ಬಿಟ್ಟರೆ ಬೇರೇನೂ ಉಳಿದಿಲ್ಲ ಎನ್ನುವಂತಾಗಿದೆ. ತನ್ನ ಕುಟುಂಬದ ಸದಸ್ಯರೊಂದಿಗೆ ಸೇರಿ ಪ್ರೇಮಿಯ ಮೇಲೆ ಗಂಭೀರವಾಗಿ ಹಲ್ಲೆಗೈದ ಯುವತಿ, ವ್ಯಕ್ತಿಯ ದೇಹದಲ್ಲಿನ 13 ಮೂಳೆ ಮುರಿಯುವ ಮಟ್ಟಿಗೆ ಹಿಗ್ಗಾಮುಗ್ಗಾ ಥಳಿಸಿರುವುದು ಇದೀಗ ಬೆಳಕಿಗೆ ಬಂದಿದೆ.

ಮದುವೆ ವಿಚಾರ

ದೇಹದ 13 ಕಡೆ ಮೂಳೆ ಮುರಿದಿದ್ದು, ಕಳೆದ 17 ದಿನಗಳಿಂದ ಆಸ್ಪತ್ರೆಯ ಹಾಸಿಗೆಯ ಮೇಲೆ ಈತ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಸಲಿಗೆ ಈ ಘಟನೆ ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಸಂಭವಿಸಿದ್ದು, ಮೂಳೆ ಮುರಿದು ಹಾಕುವಂತ ತಪ್ಪು ಆತ ಏನು ಮಾಡಿದ್ದ? ಇಷ್ಟರ ಮಟ್ಟಿಗೆ ಥಳಿಸಿದ್ದಾಳೆ ಎಂದರೆ ಆಕೆ ಸಾಮಾನ್ಯಳಲ್ಲ ಎಂಬ ಪ್ರಶ್ನೆಗಳು ಜನರಲ್ಲಿ ಕಾಡಿದೆ. ಅಷ್ಟಕ್ಕೂ ಈ ರಾದ್ಧಾಂತಕ್ಕೆ ಕಾರಣ ಮದುವೆ ವಿಚಾರ.

ಇಬ್ಬರೂ ಪರಸ್ಪರ ಪ್ರೀತಿಸಿದ್ದೇನೋ ನಿಜ. ಆದರೆ, ಪ್ರೀತಿ ಮಾಡಿದ ನಂತರ ಮದುವೆ ಆಗಬೇಕು ಎಂಬುದು ಜಗದ ನಿಯಮ. ಅಂತೆಯೇ ಈ ವಿಚಾರವನ್ನು ಯುವತಿ ತನ್ನ ಪ್ರಿಯಕರನೊಂದಿಗೆ ಚರ್ಚಿಸಿದ್ದಾಳೆ. ಇದಕ್ಕೆ ಆರಂಭದಲ್ಲಿ ಒಪ್ಪಿಗೆ ನೀಡದ ಗಾಯಾಳು ಪ್ರೇಮಿ, ಮದುವೆಯಾಗಲು ನಿರಾಕರಿಸಿದ್ದ ಎನ್ನಲಾಗಿದೆ. ಹಲವು ಬಾರಿ ಇಬ್ಬರ ನಡುವೆ ಇದೇ ವಿಷಯಕ್ಕೆ ಆಗಾಗ್ಗೆ ಜಗಳ ಕೂಡ ನಡೆದಿದೆ. ತನ್ನನ್ನು ಮದುವೆಯಾಗುವಂತೆ ಯುವತಿ ಪ್ರಿಯಕರನನ್ನು ಒತ್ತಾಯಿಸಿದ್ದಾಳೆ. ಇದಕ್ಕೂ ಬಗ್ಗದ ಯುವಕನ ಮೇಲೆ ಏಕಾಏಕಿ ಸಿಟ್ಟಿಗೆದ್ದ ಪ್ರೇಯಸಿ, ತನ್ನ ಕುಟುಂಬಸ್ಥರ ಜತೆಗೂಡಿ ಕೈ-ಕಾಲು ಮುರಿಯುವಂತೆ ಹಲ್ಲೆ ನಡೆಸಿದ್ದಾಳೆ.

2019ರಿಂದ ಪ್ರೀತಿ ಸಂಬಂಧ

ಯುವತಿ ಕುಟುಂಬಸ್ಥರ ಥಳಿತಕ್ಕೆ ಗುರಿಯಾದ ಯುವಕನನ್ನು ಗುಲ್ಶನ್ ಎಂದು ಗುರುತಿಸಲಾಗಿದೆ. 2019ರಿಂದ ಆಳವಾದ ಪ್ರೀತಿ ಸಂಬಂಧದಲ್ಲಿದ್ದ ಈ ಗುಲ್ಶಾನ್​, ಪ್ರೇಯಸಿ ಕೇಳಿದಳು ಎಂದು 21 ಲಕ್ಷ ರೂ. ಹಣ ನೀಡಿದ್ದನಂತೆ. ಈ ಹಣವನ್ನು ತನಗೆ ವಾಪಾಸ್​ ಕೊಡು ಎಂದಿದ್ದಕ್ಕೆ ತನ್ನನ್ನು ಮದುವೆ ಆಗುವುದಾದರೆ ಮಾತ್ರ ವಾಪಾಸ್​ ಕೊಡುವುದಾಗಿ ಯುವತಿ ಹೇಳಿದ್ದಳು ಎನ್ನಲಾಗಿದೆ.

ಮದುವೆ ಆಗುವುದಕ್ಕೆ ಒಪ್ಪುವುದಾದರೆ ಹಣ ಕೊಡ್ತೀನಿ ಎಂದು ಯುವತಿ ಹೇಳಿದ್ದಾಳೆ. ಇದಕ್ಕೆ ಒಪ್ಪದ ಪ್ರಿಯಕರ, ಇಲ್ಲ ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ದೊಡ್ಡ ಜಟಾಪಟಿಯೇ ನಡೆದಿದೆ. ನಂತರದಲ್ಲಿ ತನ್ನ ಖೆಡ್ಡಾಗೆ ಗುಲ್ಶನ್​ನನ್ನು ಬೀಳಿಸಲು ಉಪಾಯ ಮಾಡಿದ ಯುವತಿ, ಹಣ ಬೇಕಾದರೆ ಮನೆಗೆ ಬಾ, ಇಲ್ಲೇ ಕೊಡುವೆ ಎಂದಿದ್ದಾಳೆ. ಅದರಂತೆಯೇ, ಆಕೆಯ ಮಾತನ್ನು ಕುರುಡಾಗಿ ನಂಬಿದ ಗುಲ್ಶನ್, ಪ್ರೇಯಸಿಯ ಮನಗೆ ಹೋಗಿದ್ದಾನೆ. ಈ ಮುಂಚೆಯೇ ಸಂಚು ಹೂಡಿದ್ದ ಯುವತಿ ಮತ್ತು ಆಕೆಯ ಕುಟುಂಬ ಸದಸ್ಯರು, ಗುಲ್ಶನ್ ಬಂದ ತಕ್ಷಣವೇ ಆತನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಐವರ ವಿರುದ್ಧ ಪ್ರಕರಣ ದಾಖಲು

ಒಬ್ಬನ ಮೇಲೆ ಹಲವರು ಗಂಭೀರವಾಗಿ ಹಲ್ಲೆಗೈದ ಹಿನ್ನೆಲೆ ಗುಲ್ಶನ್​ ದೇಹದ 13 ಕಡೆ ಮೂಳೆ ಮುರಿದಿದೆ ಹಾಗೂ ಕಳೆದ 17 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಸ್ತುತ ಗುಲ್ಶನ್ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದಾಳಿಯಲ್ಲಿ ಭಾಗಿಯಾದ ಐವರ ವಿರುದ್ಧ ಪ್ರಕರಣ ದಾಖಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net