

ಹೈದರಾಬಾದ್: ವಿಜಯ್ ಸೇತುಪತಿ ದಕ್ಷಿಣದ ಪ್ರತಿಭಾವಂತ ನಟರಲ್ಲಿ ಒಬ್ಬರು. ನಾಯಕನ ಪಾತ್ರದಿಂದ ಹಿಡಿದು ಖಳನಟನವರೆಗೆ ತಮ್ಮದೇ ಆದ ಛಾಪು ಮೂಡಿಸಿ ಸ್ಟಾರ್ ಪಟ್ಟ ಪಡೆದರು. ಯಾವುದೇ ಪಾತ್ರವಾದರೂ ಅದಕ್ಕೆ ನ್ಯಾಯ ಸಲ್ಲಿಸುತ್ತಾರೆ ಎಂದು ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ನಟ. ಸದ್ಯ ವಿಜಯ್ ಸೇತುಪತಿ ನಟನೆಯ ಮಹಾರಾಜ ಸಿನಿಮಾ ಬಿಡುಗಡೆಯಾಗಿದ್ದು ಹಿಟ್ ಆಗಿರುವುದು ಗೊತ್ತೆ ಇದೆ.
ಆರಂಭದಲ್ಲಿ ಮಹಾರಾಜ ಚಿತ್ರ ತಮಿಳಿನಲ್ಲಿ ಮಾತ್ರ ರಿಲೀಸ್ ಆಗುತ್ತದೆ ಎನ್ನಲಾಗಿತ್ತು. ಆದರೆ ಈ ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗಿದೆ. ಮೊದಲ ದಿನವೇ ಚಿತ್ರಕ್ಕೆ ಸಕಾರಾತ್ಮಕ ವಿಮರ್ಶೆಗಳು ಬಂದಿದ್ದು, ಎಂದಿನಂತೆ ವಿಜಯ್ ಸೇತುಪತಿ ಮತ್ತೊಮ್ಮೆ ತಮ್ಮ ಅಭಿನಯಕ್ಕಾಗಿ ಪ್ರಶಂಸೆಗೆ ಪಾತ್ರರಾದರು. ಇದೇ ಸಂಭ್ರಮದಲ್ಲಿ ಚಿತ್ರತಂಡ ಹೈದರಾಬಾದ್‌ನಲ್ಲಿ ಧನ್ಯವಾದ ಸಭೆಯನ್ನು ಆಯೋಜಿಸಿತ್ತು. ಈ ಸಮಯದಲ್ಲಿ ವಿಜಯ್ ಸೇತುಪತಿ ಅವರಿಗೆ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿನ ಪಾತ್ರವನ್ನು ತಿರಸ್ಕರಿಸಿದ ವಿಷಯವನ್ನು ಕೇಳಿದರು. ಇದಕ್ಕೆ ವಿಜಯ್ ಸೇತುಪತಿ ಸ್ವಾರಸ್ಯಕರ ಉತ್ತರ ನೀಡಿದ್ದಾರೆ.
ನಾನು ರಿಜೆಕ್ಟ್ ಮಾಡಲ್ಲ ಸರ್ ಎಂದು ಹೇಳಿದ ಅವರು, ಸ್ವಲ್ಪ ಸಮಯ ಬಿಟ್ಟು ಯಾವಾಗಲೂ ಸತ್ಯವನ್ನು ಹೇಳಲು ಆಗಲ್ಲ ಸರ್ ಎಂದು ನಗುತ್ತಾ ಕೆಲವೊಮ್ಮೆ ಸುಳ್ಳು ಹೇಳಬೇಕಾಗುತ್ತದೆ. ಇಲ್ಲ ಎಂದರೆ ಲೈಫ್ ಡ್ಯಾಮೇಜ್ ಆಗುತ್ತೆ ಎಂದು ತಮಾಷೆ ಮಾಡಿದ್ದಾರೆ. ವಿಲನ್ ಪಾತ್ರಗಳಲ್ಲಿ ಮಿಂಚಿರುವ ನಟ ವಿಜಯ್ ಸೇತುಪತಿಗೆ ಪುಷ್ಪ ಸಿನಿಮಾದಲ್ಲಿಯೂ ಖಳನಾಯಕನ ಪಾತ್ರಕ್ಕೆ ಆಫರ್ ನೀಡಲಾಗಿತ್ತು. ಆದರೆ ಅವರು ಅದನ್ನು ತಿರಸ್ಕರಿಸಿದ್ದಾರೆ ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡಿತ್ತು. ಅದನ್ನು ಸದ್ಯ ನಟ ವಿಜಯ್ ಸೇತುಪತಿ ಈ ವಿಷಯವನ್ನು ನಯವಾಗಿ ತಳ್ಳಿಹಾಕಿದ್ದಾರೆ. (ಏಜೆನ್ಸೀಸ್)