

ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಹಾಗೂ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಬಿಕೆ ಶಿವರಾಂ ಅವರ ಪುತ್ರಿ ಶ್ರೀಮತಿ ಸ್ಪಂದನಾ ಅವರ ಪಾರ್ಥಿವ ಶರೀರ ಇಂದು ರಾತ್ರಿ ಹನ್ನೆರಡು ಗಂಟೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಲುಪಲಿದೆ ಎಂದು ಎಸ್ಎ ಚಿನ್ನೇಗೌಡ ಹಾಗೂ ಬಿಕೆ ಶಿವರಾಂ ಕುಟುಂಬಸ್ಥರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಪ್ರಕ್ರಿಯೆ ನಂತರ ಪಾರ್ಥಿವ ಶರೀರವನ್ನು ಬಿಕೆ ಶಿವರಾಂ ಅವರ ಸ್ವಗೃಹಕ್ಕೆ ತರಲಾಗುತ್ತದೆ. ಇಂದು ಮಧ್ಯರಾತ್ರಿಯಿಂದ ದಿನಾಂಕ 9/08/2023 ಬುಧವಾರ ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ನಂತರ ನಗರದ ಸತ್ಯಹರಿಶ್ಚಂದ್ರ ರುದ್ರಭೂಮಿಯಲ್ಲಿ ಸಕಲ ವಿಧಿವಿಧಾನದಂತೆ ಅಂತ್ಯಕ್ರಿಯೆ ನೇರವೇರಿಸಲಾಗುವುದು.
ಸ್ಪಂದನಾ ವಿಜಯ್ ರಾಘವೇಂದ್ರ ಅವರು ಥೈಲ್ಯಾಂಡ್ ಪ್ರವಾಸದಲ್ಲಿ ಹೃದಯಘಾತವಾಗಿ ಸಾವನ್ನಪ್ಪಿದರು. ಸ್ಪಂದನಾ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನಿವಾಸಿಗಳು.