

ಬೆಂಗಳೂರು: ಕಮರ್ಷಿಯಲ್ ಸಿನಿಮಾಗಳ ಜತೆಗೆ ನಾಡಿನ ಸಂಸ್ಕೃತಿ, ಇತಿಹಾಸ ಹಾಗೂ ಪೌರಾಣಿಕ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ನಟ ವಿಜಯ್ ರಾಘವೇಂದ್ರಗೆ ಸಲ್ಲುತ್ತದೆ. ಈ ಹಿಂದೆ ‘ಕೊಲ್ಲೂರ ಶ್ರೀ ಮೂಕಾಂಬಿಕೆ’, ‘ಗಾನಯೋಗಿ ಪಂಚಾಕ್ಷರಿ ಗವಾಯಿ’, ‘ಶ್ರೀ ಸ್ವಾಮಿ ವಿವೇಕಾನಂದ’, ‘ಕಲ್ಲರಳಿ ಹೂವಾಗಿ’ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಅವರು ‘ರುದ್ರಾಭಿಷೇಕಂ’ ಚಿತ್ರದ ಮೂಲಕ ನಾಡಿನ ಜಾನಪದ ಕಲೆಯ ಮಹತ್ವವನ್ನು ಸಾರಲು ಹೊರಟಿದ್ದಾರೆ.
ವಸಂತ್‌ಕುಮಾರ್ ನಿರ್ದೇಶನದ ‘ರುದ್ರಾಭಿಷೇಕಂ’ ಚಿತ್ರದಲ್ಲಿ ವಿಜಯ್ ರಾಘವೇಂದ್ರ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನಾಡಿನ ಸಾಂಸ್ಕೃತಿಕ ಹಿನ್ನೆಲೆಯ ಜತೆಗೆ ಜಾನಪದ ಕಲೆಯ ಇತಿಹಾಸ, ವೈಭವ ಸಾರುವ ಕಥೆಯಾಗಿದೆ. ಕಮರ್ಷಿಯಲ್ ಅಂಶಗಳಿದ್ದರೂ, ಸಾಕಷ್ಟು ದೈವಿಕ ಅಂಶಗಳನ್ನು ಒಳಗೊಂಡಿದೆ. ನಿರ್ದೇಶಕರು ವೀರಗಾಸೆ ಕಲೆಯ ಹಿನ್ನೆಲೆ ಇಟ್ಟುಕೊಂಡು ಅದ್ಭುತವಾದ ಸ್ಕ್ರಿಪ್ಟ್ ಸಿದ್ಧ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ನಾನು ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅಷ್ಟೇ ಅಲ್ಲದೇ, ಚಿತ್ರದಲ್ಲಿ ನನಗೆ ಸಾಕಷ್ಟು ಗೆಟಪ್‌ಗಳಿವೆ’ ಎಂದು ಮಾಹಿತಿ ನೀಡಿದರು.
ನಿರ್ದೇಶಕ ವಸಂತ್ ಕುಮಾರ್, ‘ನಾಡಿನ ಜನಪದ ಹಿನ್ನೆಲೆ ಇಟ್ಟುಕೊಂಡು, ನೂರಾರು ವರ್ಷಗಳ ಇತಿಹಾಸ ಇರುವ ಒಂದು ಕಲೆಯನ್ನು ಈ ಚಿತ್ರದ ಮೂಲಕ ಹೇಳಹೊಟಿದ್ದೇನೆ. ಒಂದೂವರೆ ವರ್ಷದಿಂದ ಸಾಕಷ್ಟು ರೀಸರ್ಚ್ ಮಾಡಿ ಈ ಕಥೆ ರೆಡಿ ಮಾಡಿಕೊಂಡಿದ್ದೇನೆ. ಕಥೆ ಮಾಡಿಕೊಂಡು ಒಂದಷ್ಟು ಮಠಾಧೀಶರನ್ನು ಸಂಪರ್ಕಿಸಿದಾಗ ಅವರೆಲ್ಲ ಒಳ್ಳೆ ಪ್ರಯತ್ನ ಎಂದಿದ್ದಾರೆ. ವೀರಭದ್ರ ದೇವರನ ಅವತಾರ ಹಾಗೂ ಮಹಿಮೆಯನ್ನು ಇಲ್ಲಿ ಹೇಳುತ್ತಿದ್ದೇನೆ’ ಎಂದರು.
ವಿಜಯ್ ರಾಘವೇಂದ್ರಗೆ ಮೈಸೂರು ಮೂಲದ ರಂಗಭೂಮಿ ಪ್ರತಿಭೆ ಪ್ರೇರಣಾ ಜೋಡಿಯಾಗಿದ್ದಾರೆ. ಬಲ ರಾಜವಾಡಿ ಸೇರಿ ಹಲವು ಹಿರಿಯ ಕಲಾವಿದರು ತಾರಾಗಣದಲ್ಲಿದ್ದಾರೆ. ವಿ.ಮನೋಹರ್ ಸಂಗೀತ, ಮುತ್ತುರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ಉಳಿದಂತೆ, ವಿಜಯ್ ರಾಘವೇಂದ್ರ ‘ರಿಪ್ಪನ್‌ಸ್ವಾಮಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.