ಇದೊಂದು ವಿಷಯಕ್ಕೆ ಸಖತ್ ಥ್ರಿಲ್ ಆದ 'ದಳಪತಿ' ಫ್ಯಾನ್ಸ್​​! ಬಾಕ್ಸ್​ ಆಫೀಸ್​ನಲ್ಲಿ ಮುಂದುವರಿದ ವಿಜಯ್​ ಅಬ್ಬರ

ವಿಜಯವಾಣಿ - 2024-09-09T172229.926
Published on

ತಮಿಳುನಾಡು: ತಮಿಳು ನಟ, ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​’ (GOAT) ಸಿನಿಮಾ ಇದೇ ಸೆ.05ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಈ ಹಿಂದಿನಿಂದಲೂ ವಿಜಯ್ ಸಿನಿಮಾ ಅಂದರೆ ಅಲ್ಲಿ ಆ್ಯಕ್ಷನ್​, ಮನರಂಜನೆಗೆ ಹೇಳಿ ಮಾಡಿಸಿದ ಅಂಶಗಳಿರುತ್ತವೆ ಎಂಬುದು ಸಿನಿಪ್ರಿಯರ ನಿರೀಕ್ಷೆ. ಆ ನಿರೀಕ್ಷೆ ಇದೀಗ ಮತ್ತೊಮ್ಮೆ ಸಾಬೀತಾಗಿದೆ. ರಿಲೀಸ್​ಗೂ ಮುನ್ನವೇ ಭಾರೀ ಕುತೂಹಲ ಕೆರಳಿಸಿದ್ದ ಗೋಟ್​ ಚಿತ್ರ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದು, ಇಂದಿಗೂ ಸಹ ಬಾಕ್ಸ್​ ಆಫೀಸ್​ನಲ್ಲಿ ತನ್ನ ಅಬ್ಬರ ಮುಂದುವರಿಸಿದೆ.

ವೆಂಕಟೇಶ್ ಪ್ರಭು ನಿರ್ದೇಶನದಲ್ಲಿ ಮೂಡಿಬಂದಿರುವ ‘ಗೋಟ್’​ ಚಿತ್ರದಲ್ಲಿ ಹಲವು ನಿರೀಕ್ಷೆಗೂ ಮೀರಿದ ಅಂಶಗಳಿವೆ ಎಂದು ಹೇಳಲಾಗಿತ್ತು. ಆ ಪೈಕಿ ಮೊದಲ ಸರ್ಪ್ರೈಸ್​ ಚಿತ್ರ ಬಿಡುಗಡೆಗೆ ಒಂದು ದಿನಕ್ಕೂ ಮುಂಚಿತವಾಗಿಯೇ ರಿವೀಲ್ ಆಗಿತ್ತು. ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಮಾಜಿ ಆಟಗಾರ ಸುಬ್ರಮಣಿಯಂ ಬದ್ರಿನಾಥ್ ​ವಿಶೇಷ ಪಾತ್ರವೊಂದನ್ನು ನಿರ್ವಹಿಸಿದರೆ, ಕ್ರಿಕೆಟ್​ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರ ಎಂಟ್ರಿ ಫ್ಯಾನ್ಸ್​ಗಳನ್ನು ಭಾರೀ ಸಂತಸಕ್ಕೆ ದೂಡಿತು.

ಸದ್ಯ ಟ್ವಿಟರ್​ನಲ್ಲಿ ಟ್ರೆಂಡ್ ಆಗ್ತಿರುವ ವಿಜಯ್ ಅಭಿನಯದ ‘ಗೋಟ್’​ ಚಿತ್ರದಲ್ಲಿ ಚಿತ್ರರಸಿಕರಿಗೆ ಹಾಗೂ ದಳಪತಿ ಅಭಿಮಾನಿಗಳಿಗೆ ಬಹಳ ಇಷ್ಟವಾದ ವಿಷಯ ಎಂದರೆ ಅದು ತಮಿಳು ಚಿತ್ರರಂಗದ ಸ್ಟಾರ್​ ನಟರ ಸಮಾಗಮ. ಒಬ್ಬರಲ್ಲ, ಇಬ್ಬರಲ್ಲ ಹಲವು ಕಾಲಿವುಡ್​ ಹೀರೋಗಳು ಚಿತ್ರದ ಭಾಗವಾಗಿದ್ದಾರೆ. ನಟ ಶಿವಕಾರ್ತಿಕೆಯನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರೆ​, ಪ್ರಭುದೇವ, ತಲೈವಾ ರಜನಿಕಾಂತ್, ಕಮಲ್ ಹಾಸನ್, ಅಜಿತ್ ಮತ್ತು ಸೂರ್ಯ ಸೇರಿದಂತೆ ಸೂಪರ್​ ಸ್ಟಾರ್​ಗಳ ದರ್ಶನ ಪಡೆದ ಫ್ಯಾನ್ಸ್​ ಸಖತ್ ಥ್ರಿಲ್ ಆಗಿದ್ದಾರೆ. ಚಿತ್ರ ರಿಲೀಸ್ ಆಗಿ ಇಂದಿಗೆ ನಾಲ್ಕು ದಿನಗಳು ಕಳೆದಿದ್ದು, ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ಗೋಟ್ 285 ಕೋಟಿ ರೂ. ಗಳಿಕೆ ಕಂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net