

ಬೆಂಗಳೂರು: ಇದು ಆಕಸ್ಮಿಕ ಘಟನೆಯಲ್ಲ, ರಾಕ್ಷಸಿ ಕೃತ್ಯ. ಸಮಾಜ ಮತ್ತು ದೇಶ ದ್ರೋಹಿಗಳು ಮಾಡುವ ಕೆಲಸವಿದು. ದುಷ್ಕೃತ್ಯ ಖಂಡಿಸುವ ಬದಲಿಗೆ ಪರೋಕ್ಷವಾಗಿ ಸಮರ್ಥಿಸಿಕೊಂಡ ಶಾಸಕ ಜಮೀರ್ ಅಹ್ಮದ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂಗೆ ನಾಚಿಕೆಯಾಗಬೇಕು. ವ್ಯವಸ್ಥಿತವಾಗಿ ಸಂಚು ರೂಪಿಸಿ ಕುಕೃತ್ಯ ಎಸಗಿದವರು ಹಾಗೂ ಕುಮ್ಮಕ್ಕು ನೀಡಿದವರನ್ನು ಸರ್ಕಾರ ಸುಮ್ಮನೆ ಬಿಡಲ್ಲ. ಎಲ್ಲರನ್ನೂ ಮಟ್ಟ ಹಾಕುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಗುಡುಗಿದರು.
ದಿಗ್ವಿಜಯ ನ್ಯೂಸ್ 247 ಹಾಗೂ ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿ, ಪಾದರಾಯನಪುರ ಪ್ರಕರಣದ ಬಗ್ಗೆ ಕಿಡಿಕಾರಿದರು.
ಭೀತಿ ವ್ಯಕ್ತಪಡಿಸಿದವರಿಗೆ ಅಭಯ: ಪ್ರಶ್ನೆ ಕೇಳಿದ ಬಹುತೇಕ ಜನ ಪಾದರಾಯನಪುರ ಘಟನೆ ಪ್ರಸ್ತಾಪಿಸಿ ಭೀತಿ ವ್ಯಕ್ತಪಡಿಸಿದಾಗ ರಾಜ್ಯದಲ್ಲಿ ಶೇ.95 ಸಾತ್ವಿಕರಿದ್ದಾರೆ. ಶೇ.5 ದುಷ್ಟರ ಬಗ್ಗೆ ದಿಗಿಲುಗೊಳ್ಳುವುದು ಬೇಡ. ಸರ್ಕಾರ ನಿಮ್ಮ ಜತೆಗಿದೆ, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕ್ರಮವಹಿಸಲಿದೆ ಎಂದು ಈಶ್ವರಪ್ಪ ಅಭಯ ನೀಡಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಸೋಂಕು ದೃಢಪಟ್ಟ ಪ್ರಕರಣಗಳು ಕಡಿಮೆ ಇವೆ. ಇದು, ಸರ್ಕಾರದ ಸಮರೋಪಾದಿ ಕೆಲಸಗಳಿಗೆ ನಿದರ್ಶನ. ಇದೇ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಸಂಘ-ಸಂಸ್ಥೆಗಳು ಉದಾರ ನೆರವು ನೀಡಿ ಸರ್ಕಾರದೊಂದಿಗೆ ಕೈಜೋಡಿಸಿವೆ.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡುವುದಕ್ಕೂ ಸರ್ಕಾರ ಯೋಜನೆ ರೂಪಿಸಿದ್ದು, ಸಾಕಷ್ಟು ಹಣವಿದೆ. ಲಾಕ್ಡೌನ್ ನಿಯಮಾವಳಿ ಪ್ರಕಾರ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಬಯಸಿದವರ ಕೈಗೆ ಕೆಲಸ ನೀಡಲುಸಿದ್ಧವಿದೆ ಎಂದರು.
ಪರಿಸ್ಥಿತಿ ಸಮಾಧಾನಕರ ಆಗಿದ್ದರೂ ಲಾಕ್ಡೌನ್ ಬಿಗಿಕ್ರಮ ಮುಂದುವರಿಸಿದೆ. ಜನರ ಜೀವ ಹಾಗೂ ಆರೋಗ್ಯ ರಕ್ಷಣೆಯೇ ಮುಖ್ಯವಾಗಿದ್ದು, ಇದನ್ನು ಅರ್ಥ ಮಾಡಿಕೊಳ್ಳದವರು ಯೋಜಿತ ದುಷ್ಕೃತ್ಯ ಎಸಗಿದ್ದಾರೆ. ಮೊದಲ ಘಟನೆ ನಡೆದಾಗ ಮಾನವೀಯತೆ ದೃಷ್ಟಿಯಿಂದ ಸರ್ಕಾರ ಮೃದು ಧೋರಣೆ ತಳೆಯಿತು, ಇನ್ನೂ ಸುಮ್ಮನೆ ಕೂರಲ್ಲವೆಂಬುದಕ್ಕೆ ಉತ್ತರ ಪ್ರದೇಶ ಹಾಗೂ ಕೇರಳ ಮಾದರಿ ಕಠಿಣ ಕಾನೂನು ಜಾರಿಗೆ ನಿರ್ಧರಿಸಿರುವುದೇ ನಿದರ್ಶನ ಎಂದರು.
ಜಮೀರ್-ಇಬ್ರಾಹಿಂ ಆಟ ಇಲ್ಲಿ ನಡೆಯಲ್ಲ
ದುಷ್ಕೃತ್ಯವನ್ನು ಖಂಡಿಸಿ, ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ ಎಂದು ಒತ್ತಾಯಿಸಬೇಕಾಗಿದ್ದ ಸಿ.ಎಂ.ಇಬ್ರಾಹಿಂ ಹಾಗೂ ಜಮೀರ್ ಅಹ್ಮದ್ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಅಮಾಯಕರು, ಅನಕ್ಷರಸ್ಥರು, ರಾತ್ರಿ ಹೋಗಬೇಕಿತ್ತೇಕೆ? ಎಂದು ಪ್ರಶ್ನಿಸುವ ಮೂಲಕ ಕುಮ್ಮಕ್ಕು ನೀಡಿದ್ದಾರೆ. ಸ್ವಾರ್ಥ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಇಂತಹ ಆಟ ಇನ್ನು ಮುಂದೆ ನಡೆಯಲ್ಲ. ಜಾತಿ, ಧರ್ಮದ ರಾಜಕಾರಣ ಮಾಡುವವರಿಗೆ ಆಶ್ರಯ ನೀಡಿದ ಕಾರಣಕ್ಕೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದನ್ನು ಮರೆಯಬಾರದು. ಉತ್ತರ ಪ್ರದೇಶ ಮಾದರಿ ಬೇಡವೆಂದು ಇಬ್ರಾಹಿಂ ಹೇಳುತ್ತಾರೆ, ಪಾಕಿಸ್ತಾನದ ಮಾದರಿ ಬೇಕಾ ? ಇವೆಲ್ಲ ನಡೆಯಲ್ಲ ಎಂದು ಸಚಿವರು ಕುಟುಕಿದರು.