ಐಯುಎಂಎಲ್ ಶಾಸಕ​ ಶಾಜಿ ವಿರುದ್ಧ ತನಿಖೆಗೆ ಆದೇಶ ನೀಡಿದ ವಿಜಿಲೆನ್ಸ್ ಕೋರ್ಟ್

k-m-shaji
Published on

ತಿರುವನಂತಪುರ: ಘೋಷಿತ ಆದಾಯಕ್ಕೂ ಮೀರಿದ ಆಸ್ತಿ ಹೊಂದಿದ ಆರೋಪ ಎದುರಿಸುತ್ತಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್​ ( ಐಯುಎಂಎಲ್​ ) ಶಾಸಕ ಕೆ.ಎಂ.ಶಾಜಿ ವಿರುದ್ಧ ತನಿಖೆಗೆ ವಿಜಿಲೆನ್ಸ್ ಕೋರ್ಟ್ ಸೋಮವಾರ ಆದೇಶ ನೀಡಿದೆ. ಕೋಳಿಕ್ಕೋಡ್​ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ಬ್ಯೂರೋ ಎಸ್​ಪಿಗೆ ಕೋರ್ಟ್​ ಈ ಆದೇಶ ನೀಡಿದ್ದು, ಶಾಸಕರ ವಿರುದ್ಧದ ಆರೋಪದ ಬಗ್ಗೆ ತನಿಖೆ ನಡೆಸಬೇಕು ಎಂದು ನ್ಯಾಯಾಧೀಶ ಕೆ.ವಿ.ಜಯಕುಮಾರ್​ ನಿರ್ದೇಶಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ, ವಕೀಲ ಎಂ.ಆರ್.ಹರೀಶ್​ ಸಲ್ಲಿಸಿದ ದೂರು ಅರ್ಜಿ ಆಧರಿಸಿ ವಿಜಿಲೆನ್ಸ್ ಕೋರ್ಟ್​ ಈ ನಿರ್ದೇಶನ ನೀಡಿದೆ. ಕೆ.ಎಂ.ಶಾಜಿ ಅಜಿಕೋಡ್ ಶಾಸಕರಾಗಿದ್ದು, ವಯನಾಡು, ಕಣ್ಣೂರು, ಕೋಳಿಕ್ಕೋಡ್​ ಜಿಲ್ಲೆಗಳಲ್ಲಿ ಕನಿಷ್ಠ 2 ಕೋಟಿ ರೂಪಾಯಿ ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಅಂಶ ದೂರಿನಲ್ಲಿದೆ.

ಶಾಜಿ ವಿರುದ್ಧ ಸಾಗರೋತ್ತರ ಹಣಕಾಸು ವಹಿವಾಟಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ಕಣ್ಣೂರಿನ ಚಿರಕ್ಕಲ್​ನಲ್ಲಿರುವ ಶಾಜಿಯ ಮನೆಯಲ್ಲಿ ಶೋಧ ನಡೆಸಿತ್ತು. ಕೆಲವೇ ದಿನಗಳ ಹಿಂದೆ ಐಯುಎಂಎಲ್​ನ ಇನ್ನೊಬ್ಬ ಶಾಸಕ ಎಂ.ಸಿ.ಕಮರುದ್ದೀನ್​ ವಿರುದ್ಧ ಚಿನ್ನದ ವ್ಯಾಪಾರದಲ್ಲಿ ಹೂಡಿಕೆದಾರರಿಗೆ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net