

ಬೆಂಗಳೂರು: ನಾಲ್ಕು ಜಿಲ್ಲೆಗಳು, 85 ತಾಲೂಕುಗಳಿಂದ ಜಾಗೃತ ಸಮಿತಿ ರಚನೆಗೆ ಪ್ರಸ್ತಾವನೆ ಬಂದಿವೆ. ಉಳಿದ ಜಿಲ್ಲೆ, ತಾಲೂಕುಗಳಲ್ಲಿ ಜಾಗೃತ ಸಮಿತಿಗಳ ರಚನೆ ಪ್ರಕ್ರಿಯೆ ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಸೂಚಿಸಿದರು.
ವಿಕಾಸಸೌಧದಲ್ಲಿ ರಾಜ್ಯಮಟ್ಟದ ಜಾಗೃತಿ ಸಭೆ ಅಧ್ಯಕ್ಷತೆವಹಿಸಿ ಬುಧವಾರ ಮಾತನಾಡಿದ ಅವರು, ರಾಜ್ಯಮಟ್ಟದ ಜಾಗೃತ ಸಮಿತಿಗೆ ಸದಸ್ಯರ ನೇಮಕವಾಗಿದೆ. ಜತೆಗೆ ರಾಷ್ಟ್ರೀಯ ಆಹಾರಭದ್ರತಾ ಕಾಯ್ದೆಯಡಿ ಜಿಲ್ಲಾ, ತಾಲೂಕು ಹಾಗೂ ನ್ಯಾಯಬೆಲೆ ಅಂಗಡಿಮಟ್ಟದ ಜಾಗೃತ ಸಮಿತಿಗಳನ್ನು ರಚಿಸಬೇಕಾಗಿದ್ದು, ಈ ಸಮಿತಿ ಅವಧಿ ಎರಡು ವರ್ಷಗಳದ್ದಾಗಿದೆ.
ನ್ಯಾಯಬೆಲೆ ಅಂಗಡಿ ಸಮಿತಿಗಳು ಪ್ರತಿ ಮಾಸಿಕ ಏಳನೇ ತಾರೀಖು, ತಾಲೂಕು, ಜಿಲ್ಲಾ ಮತ್ತು ರಾಜ್ಯ ಸಮಿತಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕಾಗುತ್ತದೆ. 20,483 ನ್ಯಾಯಬೆಲೆ ಅಂಗಡಿಗಳ ಸಮಿತಿಗಳು ಚಾಲ್ತಿಯಲ್ಲಿವೆ. ಅವಧಿ ಮುಗಿದ 236 ತಾಲೂಕುಗಳು, 31 ಜಿಲ್ಲೆಗಳ ಸಮಿತಿಗಳನ್ನು ಪುನರ್ ರಚಿಸಬೇಕಾಗಿದೆ ಎಂದು ಸಭೆಗೆ ವಿವರಿಸಲಾಯಿತು.
ರಾಜ್ಯಮಟ್ಟದ ಜಾಗೃತ ಸಮಿತಿಗೆ ಸಚಿವ ಕೆ.ಎಚ್.ಮುನಿಯಪ್ಪ ಅಧ್ಯಕ್ಷರಾಗಿದ್ದಾರೆ. ಸಂಸದ ತುಕಾರಾಂ, ಶಾಸಕರಾದ ಇಕ್ಬಾಲ್ ಹುಸೇನ್, ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಸೇರಿ ಅಧಿಕಾರೇತರರು, ಅಧಿಕಾರಿಗಳು ಒಳಗೊಂಡು ಒಂಭತ್ತು ಸದಸ್ಯರಿದ್ದಾರೆ. ಇಲಾಖೆ ಕಾರ್ಯದರ್ಶಿ ಸಮಿತಿಗೆ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಸಭೆಯಲ್ಲಿ ಸಂಸದ ತುಕಾರಾಂ, ಶಾಸಕರಾದ ಇಕ್ಬಾಲ್ ಹುಸೇನ್, ಬಸನಗೌಡ ಬಾದರ್ಲಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ಆಯುಕ್ತೆ ವಿಜಯ ಜ್ಯೋತ್ಸ್ನಾ ಇನ್ನಿತರ ಅಧಿಕಾರಿಗಳು ಇದ್ದರು.