

ಶಿವಮೊಗ್ಗ: ಶಿಮುಲ್(ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟ) ಅಧ್ಯಕ್ಷರಾಗಿ ಹೊಸನಗರದ ವಿದ್ಯಾಧರ ಮತ್ತು ಉಪಾಧ್ಯಕ್ಷರಾಗಿ ದಾವಣಗೆರೆಯ ಚೇತನ್ ನಾಡಿಗೇರ ಅವಿರೋಧವಾಗಿ ಆಯ್ಕೆಯಾದರು.
ಮಾಚೇನಹಳ್ಳಿಯ ಶಿಮುಲ್‌ನ ಆಡಳಿತ ಮಂಡಳಿ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚು ಗೆಲುವು ಸಾಧಿಸಿದ್ದರಿಂದ 15:15 ತಿಂಗಳ ನಾಲ್ಕು ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ನಿರ್ಧಾರ ಮಾಡಿ ಮೊದಲ ಅವಧಿಯಲ್ಲೇ ವಿದ್ಯಾಧರ ಮತ್ತು ಚೇತನ್ ನಾಡಿಗೇರ ಅಧಿಕಾರದ ಚುಕ್ಕಾಣಿ ಹಿಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಹಾಲಿ ನಿರ್ದೇಶಕ ಆರ್.ಎಂ.ಮಂಜುನಾಥ್‌ಗೌಡ ಬಣದಲ್ಲಿ ಗುರುತಿಸಿಕೊಂಡಿದ್ದ ವಿದ್ಯಾಧರ್ ಅಧ್ಯಕ್ಷರಾಗಿರುವುದು ಇದು ಎರಡನೇ ಬಾರಿ. ಕಳೆದ ಆಡಳಿತ ಮಂಡಳಿಯ ಅವಧಿಯಲ್ಲೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಶಿಮುಲ್‌ಗೆ ಪ್ರಥಮ ಬಾರಿಗೆ ಆಯ್ಕೆಯಾಗಿರುವ ಚೇತನ್ ನಾಡಿಗೇರ್‌ಗೆ ಮೊದಲ ಅವಧಿಯಲ್ಲೇ ಉಪಾಧ್ಯಕ್ಷರಾಗುವ ಅದೃಷ್ಟ ಒಲಿದುಬಂದಿದೆ.
ಆ.14ರಂದು ಶಿಮುಲ್‌ನ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನ(14ರಲ್ಲಿ ಇಬ್ಬರು ಅವಿರೋಧ ಆಯ್ಕೆ)ಕ್ಕೆ ಚುನಾವಣೆ ನಡೆದಿತ್ತು. ಅದರಲ್ಲಿ ಕಾಂಗ್ರೆಸ್ ಬೆಂಬಲಿತ 8 ಮಂದಿ ಆಯ್ಕೆಯಾಗಿದ್ದರೆ, ಬಿಜೆಪಿ ಬೆಂಬಲಿತ ನಾಲ್ವರು, ಜೆಡಿಎಸ್ ಮತ್ತು ಪಕ್ಷೇತರರಾಗಿ ತಲಾ ಒಬ್ಬರು ಆಯ್ಕೆಯಾಗಿದ್ದರು. ಆರ್.ಎಂ.ಮಂಜುನಾಥ್‌ಗೌಡ ಮತ್ತು ವಿದ್ಯಾಧರ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದರು.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಹಾಲಿ ನಿರ್ದೇಶಕರಾದ ಆರ್.ಎಂ.ಮಂಜುನಾಥ ಗೌಡ, ಎಚ್.ಬಿ.ದಿನೇಶ್, ಡಿ.ಆನಂದ, ಟಿ.ಶಿವಶಂಕರಪ್ಪ, ಟಿ.ಎಸ್.ದಯಾನಂದಗೌಡ್ರು, ಜಗದೀಶಪ್ಪ ಬಣಕಾರ್, ಎಚ್.ಕೆ.ಬಸಪ್ಪ, ಬಿ.ಜಿ.ಬಸವರಾಜಪ್ಪ, ಬಿ.ಆರ್.ರವಿಕುಮಾರ್, ಬಿ.ಸಿ.ಸಂಜೀವಮೂರ್ತಿ, ಜಿ.ಪಿ.ರೇವಣಸಿದ್ದಪ್ಪ, ಜಿ.ಬಿ.ಶೇಖರಪ್ಪ ಮತ್ತಿತರರಿದ್ದರು.