ವಿಧಾನಸಭೆ ಪಶ್ಚಿಮಾಭಿಮುಖ ಎಂಟ್ರಿಗೂ ಆಕರ್ಷಣೀಯ ಬಾಗಿಲು

VidhanaSoudha
Published on

ಬೆಂಗಳೂರು:
ವಿಧಾನಸಭೆ ಕಲಾಪಕ್ಕೆ ಇನ್ನಷ್ಟು ಮೆರಗು ನೀಡುವ ನಿಟ್ಟಿನಲ್ಲಿ ಮುಂದಾಗಿರುವ ಸ್ಪೀಕರ್ ಯು.ಟಿ.ಖಾದರ್ ಅವರು ವಿಧಾನಸಭೆಗೆ ಪಶ್ಚಿಮಾಭಿಮುಖವಾಗಿ ಹಿಂಬಾಗಲನ್ನು ರೋಸ್‌ವುಡ್‌ನಿಂದ ಆಕರ್ಷಣೀಯವಾಗಿ ಮಾಡಿಸುತ್ತಿದ್ದಾರೆ.
ಕೆಂಗಲ್ ಪ್ರತಿಮೆ ಗೇಟ್ ಮೂಲಕ ವಿಧಾನಸೌಧ ಪ್ರವೇಶಿಸಿ ಮೊದಲ ಮಹಡಿಗೆ ಮೆಟ್ಟಿಲು ಹತ್ತಿ ವಿಧಾನಸಭೆ ಪ್ರವೇಶ ಮಾಡುವ ವ್ಯವಸ್ಥೆ ಇದೆ. ಈ ಗೇಟ್ ಗ್ರಿಲ್ ಮೂಲಕವಷ್ಟೆ ಮಾಡಲಾಗಿತ್ತು. ಹೈಕೋರ್ಟ್ ಕಡೆಯಿಂದ ಪ್ರವೇಶ ಮಾಡುವ ಪೂರ್ವಾಭಿಮುಖವಾಗಿರುವ ಬಾಗಿಲನ್ನು ರೋಸ್‌ವುಡ್ ಮೂಲಕ ಮಾಡಲಾಗಿದ್ದು ಆಕರ್ಷಣೀಯವಾಗಿದೆ. ಇದೇ ಮಾದರಿಯಲ್ಲಿ ಪಶ್ಚಿಮಾಭಿಮುಖವಾಗಿಯೂ ಬಾಗಿಲು ಮಾಡಬೇಕು ಎನ್ನುವ ತೀರ್ಮಾನ ತೆಗೆದುಕೊಂಡ ಸ್ಪೀಕರ್ ಈ ಯೋಜನೆಯನ್ನು ಕೇವಲ 1 ತಿಂಗಳ ಅವಧಿಯಲ್ಲಿಯೇ ಕಾರ್ಯರೂಪಕ್ಕೆ ತಂದಿದ್ದಾರೆ.
ಇದಕ್ಕಾಗಿ ಸರ್ಕಾರದಿಂದ ಪ್ರತ್ಯೇಕ ಬಜೆಟ್ ಕೇಳುವ ಗೋಜಿಗೆ ಹೋಗಿಲ್ಲ. ಉಳಿತಾಯದ ಹಣವನ್ನು ಕ್ರೋಢೀಕರಿಸಿ ದೊಡ್ಡಬಾಗಿಲು ಮಾಡಿಸಲಾಗುತ್ತಿದೆ.
50 ಲಕ್ಷ ರೂ ಅಂದಾಜಿನಲ್ಲಿ ನಡೆಯುತ್ತಿರುವ ಈ ಬಾಗಿಲಿನಲ್ಲಿ ಕೆತ್ತನೆಯ ಕುಸರಿ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಸಲಾಗಿದೆ. ಇನ್ನೊಂದು ವಾರದಲ್ಲಿ ಕೆಲಸಗಳು ಮುಗಿಯುವ ನಿರೀಕ್ಷೆಯಿದೆ.
ಅಲ್ಲಿರುವ ಕಂಬಗಳಿಗೂ ರೋಸ್‌ವುಡ್‌ನಲ್ಲಿ ಆಕರ್ಷಣೀಯವಾಗಿಸಲು ಕ್ರಮ ವಹಿಸಲಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಕ್ಷಿ ಅವರು ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net