

ಬೆಂಗಳೂರು: ವಿಧಾನಸಭೆಯ ಶಾಸಕರ ಬಲದ ಆಧಾರದಲ್ಲಿ ವಿಧಾನಪರಿಷತ್ನ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಗಲಿಬಿಲಿಗೊಂಡಿದೆ. ಈ ಚುನಾವಣೆಯಲ್ಲಿ ಬಿಜೆಪಿಯಿಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಭ್ಯರ್ಥಿಯಾಗಿದ್ದಾರೆ. ಇವರ ಎದುರಿಗೆ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಿದರೂ ಗೆಲ್ಲಲು ಬೇಕಾದ ಮತ ಪಡೆದುಕೊಳ್ಳುವುದು ಕಷ್ಟ ಸಾಧ್ಯ. ಇಷ್ಟರ ನಡುವೆ ಅನಿಲ್ ಎಂಬುವರು ಜೆಡಿಎಸ್ ಬೆಂಬಲದೊಂದಿಗೆ ಕಣಕ್ಕಿಳಿದಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್ ನಾಯಕರಲ್ಲಿ ಗೊಂದಲ ಸೃಷ್ಟಿಸಿದೆ.
ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ವರಿಷ್ಠರೊಂದಿಗೆ ಚರ್ಚೆ ಮಾಡಿರುವ ಅನಿಲ್, ಇದೀಗ ದೆಹಲಿಗೆ ತೆರಳಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೂ ಮಾತುಕತೆ ನಡೆಸಿ ಕುತೂಹಲ ಮೂಡಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮಿಂದ ಅಭ್ಯರ್ಥಿಯೂ ಹಾಕುವುದಿಲ್ಲ, ಯಾರನ್ನೂ ಬೆಂಬಲಿಸಲ್ಲ ಎಂದು ಮೂರು ದಿನಗಳ ಹಿಂದೆ ಎರಡೆರಡು ಬಾರಿ ಸ್ಪಷ್ಟಪಡಿಸಿದ್ದಾರೆ. ಇಷ್ಟರ ನಡುವೆ ಅನಿಲ್ ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕ ಸಾಧಿಸಿರುವುದು ಮತ್ತು ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆಸಿರುವುದು ಪಕ್ಷದ ರಾಜ್ಯ ನಾಯಕರಲ್ಲಿ ಕಸಿವಿಸಿ ಮೂಡಲು ಕಾರಣವಾಗಿದೆ. ಇದೇ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಪ್ರತ್ಯೇಕ ಸಭೆ ನಡೆಸಿದ್ದು, ತಮ್ಮ ನಿಲುವಿಗೆ ಬದ್ಧರಾಗಿರಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆನ್ನಲಾಗಿದೆ.
ಬಿಜೆಪಿ 117 ಶಾಸಕ ಬಲ ಹೊಂದಿದ್ದರೆ, ಕಾಂಗ್ರೆಸ್ 68 ಮತ್ತು ಜೆಡಿಎಸ್ 34 ಶಾಸಕರನ್ನು ಹೊಂದಿದೆ. ಜತೆಗೆ ಒಬ್ಬರು ಪಕ್ಷೇತರರಿದ್ದರೆ, ಮತ್ತೊಬ್ಬರು ಬಿಎಸ್ಪಿಯಿಂದ ಆಯ್ಕೆಯಾದವರು. ಈ ಹಂತದಲ್ಲಿ ಬಿಜೆಪಿ ವಿಪ್ ಜಾರಿ ಮಾಡಿ ಈ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಸಲೀಸು. ಇಷ್ಟರ ನಡುವೆ ಸಂಪುಟ ವಿಸ್ತರಣೆ ಅಸಮಾಧಾನ ಮುಂದಿಟ್ಟುಕೊಂಡು ಮತದಾನದಿಂದ ಕೆಲವರು ದೂರ ಉಳಿದರೆ ಗೆಲ್ಲಬಹುದೆಂಬ ಲೆಕ್ಕಾಚಾರ ಪಕ್ಷೇತರ ಅಭ್ಯರ್ಥಿಯದ್ದು. ಈ ಬೆಳವಣಿಗೆ ಹಿನ್ನೆಲೆಯಲ್ಲಿಯೇ ಬಿಜೆಪಿಯಲ್ಲಿ ಒಂದಷ್ಟು ಊಹಾಪೋಹ ಹರಿದಾಡಿತ್ತು.
ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಸೋಲಿಸುವಷ್ಟು ಕೀಳುಮಟ್ಟದ ರಾಜಕಾರಣ ಮಾಡಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಪಕ್ಷದ ಅಭ್ಯರ್ಥಿ ಸೋಲಿಸುವುದು ಎಂದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ಅಂತಹ ಕೆಲಸ ನಾನು ಮಾಡುವುದಿಲ್ಲ ಎಂದು ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.