VIDEO: ಟಿಕ್​ ಟಾಕ್ ಆ್ಯಪ್ ಬಳಸುತ್ತಿದ್ದೀರಾ?: ಹಾಗಾದ್ರೆ ಈ ವಿಡಿಯೋ ತಪ್ಪದೇ ನೋಡಿ..

Published on

ಲಡಾಖ್​: ಆಮಿರ್​ ಖಾನ್​​ ಅಭಿನಯದ 3 ಇಡಿಯಟ್ಸ್ ಸಿನಿಮಾಕ್ಕೆ ಪ್ರೇರಕ ಶಕ್ತಿ ಸೋನಮ್ ವಾಂಗ್​ಚುಕ್​ ಚೀನಾ ವಸ್ತುಗಳನ್ನು ಯಾಕೆ ಬಹಿಷ್ಕರಿಸಬೇಕು ಎಂಬುದನ್ನು ವಿವರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಡಿಭಾಗದಲ್ಲಿ ಚೀನೀ ಸೇನೆ ಅತಿಕ್ರಮಣ ಮಾಡಿದ್ದು, ಆಕ್ರಮಣಕಾರಿ ಧೋರಣೆ ಅನುಸರಿಸುತ್ತಿದೆ. ಭಾರತೀಯ ಸೇನೆ, ಯೋಧರು ಅವರೊಂದಿಗೆ ಮುಖಾಮುಖಿ ಆಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಚೀನೀ ಉತ್ಪನ್ನಗಳನ್ನು ನಾವು ಖರೀದಿಸುವುದನ್ನು ಮುಂದುವರಿಸಿದರೆ ಅದರ ಪ್ರಯೋಜನ ಚೀನಾಕ್ಕೇ ಹೊರತು ಭಾರತಕ್ಕೆ ಅಲ್ಲ ಎಂಬುದನ್ನು ವಿಸ್ತೃತವಾಗಿ ವಿವರಿಸಿದ್ದಾರೆ ವಾಂಗ್​ಚುಕ್​.

ಚೀನಾದಲ್ಲಿ ಈಗಾಗಲೇ ಆಂತರಿಕವಾಗಿ ಒತ್ತಡ ಹೆಚ್ಚಾಗಿದೆ. ಅಲ್ಲಿನ ಕೈಗಾರಿಕೆಗಳು ಸ್ಥಗಿತವಾಗಿವೆ. ಜನ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಚೀನಾ ಗಡಿ ಭಾಗದಲ್ಲಿ ಆಕ್ರಮಣ ಶೀಲತೆಯನ್ನು ಪ್ರದರ್ಶಿಸುತ್ತಿದ್ದು, ಭೌಗೋಳಿಕ ಸಾರ್ವಭೌಮತೆಯ ನಾಟಕವಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಚೀನಾದ ಮೇಲೆ ನಾವು ಗೆಲುವು ಸಾಧಿಸಬೇಕಾದ್ದು ಅತೀ ಅವಶ್ಯ.

ಭಾರತದಲ್ಲಿ ಚೀನಿ ಉತ್ಪನ್ನಗಳ ಬಳಕೆ, ಖರೀದಿಯನ್ನು ನಾವು ಸ್ಥಗಿತಗೊಳಿಸಿದರೆ ನಮ್ಮ ಯೋಧರ ಶ್ರಮಕ್ಕೆ ನೈತಿಕವಾಗಿ ನಾವು ಬಲ ತುಂಬಿದಂತಾಗುತ್ತದೆ. ನಾವು ಇಲ್ಲಿದ್ದುಕೊಂಡು ಟಿಕ್​ಟಾಕ್ ಸೇರಿ ಚೀನೀ ಉತ್ಪನ್ನಗಳ ಖರೀದಿ ಬಳಕೆಯನ್ನೂ ನಿಲ್ಲಿಸಿದರೆ ಚೀನಾದ ಬಲ ಕುಸಿಯುತ್ತದೆ. ಚೀನಾದಲ್ಲಿರುವ ಸರ್ಕಾರದ ನಾಟಕವೂ ಬಹಳ ದಿನ ನಡೆಯಲಾರದು. ಈ ನಿಟ್ಟಿನಲ್ಲಿ ನಾವು ಜಾಗೃತರಾಗಬೇಕು ಎಂದು ಅವರು ವಿವರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net