ಲಡಾಖ್ ಗಡಿಗೆ ತೆರಳೋದಕ್ಕೆ ಚೀನೀ ಸೈನಿಕರು ಅಳ್ತಿದ್ದಾರಾ!?

1600753272-5f698e783a6ce
Published on

ತೈಪೇಯಿ: ಭಾರತ-ಚೀನಾ ನಡುವೆ ಲಡಾಖ್ ಭಾಗದಲ್ಲಿ ಗಡಿ ಸಂಘರ್ಷ ಏರ್ಪಟ್ಟ ಬೆನ್ನಿಗೆ, ಚೀನಾದ ಪೀಪಲ್ಸ್ ಲಿಬರೇಶನ್​ ಆರ್ಮಿ (ಪಿಎಲ್​ಎ) ಸೈನಿಕರು ಅಳ್ತಿರುವ ವಿಡಿಯೋ ಒಂದು ವೈರಲ್ ಆಗಿದೆ! ತೈವಾನ್​ನಲ್ಲಿ ಇದು ಭಾರಿ ಸದ್ದು ಮಾಡಿದ್ದು, ಪಿಎಲ್​ಎ ಸೈನಿಕರನ್ನು ಲೇವಡಿ ಮಾಡಲು ಬಳಸುತ್ತಿದ್ದಾರೆ. ಚೀನಾದ ಅತಿಕ್ರಮಣಕಾರಿ ಧೋರಣೇಯ ಕಾರಣ ತೈವಾನ್ ಜತೆಗೂ ಸಂಬಂಧ ಹಳಸಿದೆ.

ತೈವಾನ್ ನ್ಯೂಸ್ ವರದಿ ಪ್ರಕಾರ, ಪಾಕಿಸ್ತಾನದ ಕೊಮೆಡಿಯನ್​ ಝೈದ್​ ಹಮೀದ್ ಎಂಬುವವರು ಫೇಸ್​ಬುಕ್​ನಲ್ಲಿ ಅಪ್ಲೋಡ್ ಮಾಡಿದ ವಿಡಿಯೋ ಅದು. ಅದರಲ್ಲಿ ಪಿಎಲ್​​ಎ ಸೈನಿಕರು ಬಸ್​ನಲ್ಲಿ ಕುಳಿತು ಹೋಗುತ್ತಿರುವಾಗ ಹಾಡು ಕೇಳುತ್ತದೆ ಮತ್ತು ಅದಕ್ಕೆ ಅವರ ಮುಖಭಾವ ಅಳುತ್ತಿರುವಂತೆ ಕಾಣುತ್ತಿದೆ. ಈ ವಿಡಿಯೋದ ಜತೆಗೆ ಇರುವ ಕಿರುಬರಹ ಗಮನಸೆಳೆದಿದೆ. ಬಸ್​ನಲ್ಲಿರುವವರನ್ನು ಲಡಾಖ್ ಗಡಿಭಾಗಕ್ಕೆ ವರ್ಗಾವಣೆ ಮಾಡಲಾಗಿದ್ದು, ಅಲ್ಲಿ ಅವರು ಭಾರತೀಯ ಸೇನೆಯನ್ನು ಎದುರಿಸಬೇಕಾಗಿದೆ. ಚೀನಾದ ಒಂದು ಮಗು ನೀತಿ ಗಂಭೀರವಾಗಿ ಹಾನಿ ಎಸಗುತ್ತಿದ್ದು, ಚೀನೀ ಸಹೋದರರ ನೈತಿಕ ಬಲವನ್ನು ಕುಸಿಯುವಂತೆ ಮಾಡಿದೆ. ಅಷ್ಟೇ ಅಲ್ಲ, ನಾವು ಪಾಕಿಸ್ತಾನೀಯರು ಏನಿದ್ದರೂ ಚೀನಾವನ್ನೆ ಬೆಂಬಲಿಸುತ್ತೇವೆ ಎಂದು ಟಾಂಗ್ ನೀಡಿದ್ದಾರೆ.‘

ಈ ವಿಡಿಯೋ ಮೊದಲು ಫುಯಾಂಗ್ ಸಿಟಿ ವೀಕ್ಲೀಯ ವಿಚ್ಯಾಟ್ ಪೇಜ್​ನಲ್ಲಿ ಅಪ್ಲೋಡ್ ಆಗಿತ್ತು. ಚೀನಾದ ಅನ್​ಹುಯೀ ಪ್ರಾಂತ್ಯದ ಯಿಂಗ್​ಝೋವು ಜಿಲ್ಲೆಯ ಫಿಯಾಂಗ್​ ಸಿಟಿಯಿಂದ 10 ಯುವಕರು ಇತ್ತೀಚೆಗಷ್ಟೇ ಪಿಎಲ್​ಎ ಸೇರಿದ್ದು, ಅವರು ಸೇನಾ ನಿಯೋಜನೆ ಮೇಲೆ ಪ್ರಯಾಣಿಸುತ್ತಿರುವ ದೃಶ್ಯವದು. ಕೆಲವೇ ಹೊತ್ತಿನಲ್ಲಿ ಈ ವಿಡಿಯೋ ವಿಚ್ಯಾಟ್ ಪೇಜ್​ನಿಂದ ಡಿಲೀಟ್ ಆಗಿದೆ.  ಲಭ್ಯ ಮಾಹಿತಿ ಪ್ರಕಾರ, ಇವರೆಲ್ಲರೂ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಐವರು ಟಿಬೆಟ್​ನಲ್ಲಿ ಸೇವೆ ಸಲ್ಲಿಸಲು ತೆರಳುತ್ತಿದ್ದಾರೆ. ಇದು ಲಡಾಖ್ ಗಡಿಭಾಗಕ್ಕೆ ಸಮೀಪದಲ್ಲಿದೆ. ಅದಕ್ಕೂ ಮುನ್ನ ತರಬೇತಿಗಾಗಿ ಹೆಬೇಯಿ ಪ್ರಾಂತ್ಯದ ಮಿಲಿಟರಿ ಕ್ಯಾಂಪ್​ಗೆ ತೆರಳುವಾಗ ಫುಯಾಂಗ್ ರೈಲ್ವೆ ಸ್ಟೇಷನ್ ಬಳಿ ಇದನ್ನು ಚಿತ್ರೀಕರಿಸಲಾಗಿದೆ. ಅವರು ಹಾಡ್ತಾ ಇದ್ದುದು ಗ್ರೀನ್ ಫ್ಲವರ್ಸ್ ಇನ್ ದ ಆರ್ಮಿ ಎಂಬ ಪಿಎಲ್​ಎಯ ಹಾಡು! (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net