

ಚೆನ್ನೈ : ಸೂಪರ್ ಸ್ಟಾರ್ ರಜನೀಕಾಂತ್ ತರಹ ಕಾಣುವ ಹಲವು ಮಿಮಿಕ್ರಿ ಕಲಾವಿದರು ಪುಟ್ಟ ಊರುಗಳಲ್ಲಿ ಜನರನ್ನು ರಂಜಿಸುವ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಇಂಥದೇ ಒಬ್ಬ ಕಲಾವಿದ ರಜನೀಕಾಂತ್ರ ಕೆಲವು ಸಿಗ್ನೇಚರ್ ಸ್ಟೈಲ್ಗಳನ್ನು ವೇದಿಕೆಯ ಮೇಲೆ ಅನುಕರಿಸುತ್ತಾ ನಗೆಪಾಟಲಾಗಿರುವ ವಿಡಿಯೋವೊಂದು ವೈರಲ್ ಆಗಿದೆ.
ವಿವಾಹ ಅಥವಾ ಮತ್ತಾವುದೋ ಸಮಾರಂಭದಲ್ಲಿ ಪುಟ್ಟ ವೇದಿಕೆಯಲ್ಲಿ 'ತಲೈವ' ಶೈಲಿಯಲ್ಲಿ ಡ್ರೆಸ್ ಮಾಡಿಕೊಂಡಿರುವ ಕಲಾವಿದ, ತೆರೆಯ ಮೇಲೆ ರಜನೀ ಅವರು ನಿರಾಯಾಸವಾಗಿ ಮಾಡುವ ಸ್ಟಂಟ್ ಒಂದನ್ನು ಮಾಡಲು ಪ್ರಯತ್ನಿಸಿದ್ದಾನೆ. ರಜನೀಕಾಂತ್ ನಡೆಯುವ, ನಗುವ ರೀತಿಯನ್ನು ಚೆನ್ನಾಗಿ ಅನುಕರಿಸುತ್ತಾ, ಕುರ್ಚಿಯೊಂದಕ್ಕೆ ಕಾಲಿನಿಂದ ಒದ್ದಾಗ, ಆ ಪ್ಲಾಸ್ಟಿಕ್ ಕುರ್ಚಿಯಲ್ಲಿ ತೂತಾಗಿ ಅವನ ಕಾಲು ಸಿಕ್ಕಿಹಾಕಿಕೊಂಡಿದೆ. ಆತ ಆಯ ತಪ್ಪಿ ಬೆನ್ನ ಮೇಲೆ ಧೊಪ್ಪೆಂದು ಬಿದ್ದಿದ್ದಾನೆ, ಪಾಪ!
ನಂತರ ಸಹಾಯಕರು ಅವನ ಕಾಲಿನಿಂದ ಕುರ್ಚಿಯನ್ನು ಹೊರಕ್ಕೆಳೆಯುವ ಪ್ರಯತ್ನ ಮಾಡುವುದೂ ವಿಡಿಯೋದಲ್ಲಿ ದಾಖಲಾಗಿದೆ. ನಿರಂಜನ್ ಮಹಾಪಾತ್ರ ಎಂಬುವರು ಈ ವಿಡಿಯೋ ತುಣುಕನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಕಳೆದ ಕೆಲವು ದಿನಗಳಿಂದ ಇದು ಜಾಲತಾಣದಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್)