

ಬೆಂಗಳೂರು: ದಶಕಗಳ ಹಿಂದೆ ಬಂದ ಪ್ರೇಮಲೋಕ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ನಟನೆಯ ಪ್ರೀತಿಪ್ರಣಯದ ರಸವತ್ತಾದ ದೃಶ್ಯಗಳು ಯುವಜನರ ಮನ ಸೆಳೆದಿದ್ದವು. ಇದೀಗ ಅವರ ಮಗ ಮನೋರಂಜನ್ ನಾಯಕತ್ವದ 'ಮುಗಿಲ್ಪೇಟೆ' ಎಂಬ ಪ್ರೇಮಚಿತ್ರದಲ್ಲಿ ಅದೇ ರೀತಿಯ ಜಾದೂ ಸೃಷ್ಟಿಸುವ ಪ್ರಯತ್ನದಲ್ಲಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಮುಗಿಲ್ಪೇಟೆ ಚಿತ್ರದ 'ತಾರೀಫು ಮಾಡಲು ತಾರೀಕು ಮೂಡಿದೆ...' ಹಾಡಿನ ವಿಡಿಯೋವನ್ನು ಲಹರಿ ಮ್ಯೂಸಿಕ್ನವರು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದ್ದರು. ಆ ಚಿತ್ರಗೀತೆಗೆ 24 ಗಂಟೆಗಳಲ್ಲಿ 700 ಸಾವಿರ ಪ್ಲಸ್ ವೀಕ್ಷಣೆಗಳು ಲಭಿಸಿದ್ದು, ಎರಡನೇ ದಿನದಲ್ಲೇ ಒಂದು ಮಿಲಿಯನ್ ವೀಕ್ಷಣೆಗಳ ಮಟ್ಟವನ್ನು ದಾಟಿತ್ತು. ಇದೂ ಸೇರಿದಂತೆ, ಚಿತ್ರದ ಎಲ್ಲಾ ಅಪ್ಡೇಟ್ಗಳನ್ನೂ ಮನೋರಂಜನ್ ನಿಯಮಿತವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡುತ್ತಾ ಬಂದಿದ್ದಾರೆ.
ಇದೀಗ ಚಿತ್ರಕ್ಕೆ ಸಂಬಂಧಿಸಿದ ಮತ್ತೊಂದು ಕುತೂಹಲಕಾರಿ ಅಂಶವನ್ನು ಟ್ವಿಟರ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪ್ರೇಮಲೋಕ ಚಿತ್ರದಲ್ಲಿ ರವಿಚಂದ್ರನ್ ಮತ್ತು ಜೂಹಿ ಚಾವ್ಲಾ ನಡುವಿನ ಇಂಟಿಮೇಟ್ ಸೀನ್ನ ತುಣುಕನ್ನು 'ಮುಗಿಲ್ಪೇಟೆ' ಚಿತ್ರದಲ್ಲಿ ರೀಕ್ರಿಯೇಟ್ ಮಾಡಲಾಗಿದೆ. ಅಪ್ಪ ನಟಿಸಿದ ದೃಶ್ಯಕ್ಕೇ ಮಗ ಮನೋರಂಜನ್ ಕೂಡ ಅಭಿನಯಿಸಿದ್ದು, ಈ ಎರಡೂ ದೃಶ್ಯಗಳ ಜಂಟಿ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ. ಅದರ ಬಗ್ಗೆ ಅಭಿಮಾನಿಗಳ ಅಭಿಪ್ರಾಯಗಳನ್ನು ಕೇಳಿದ್ದಾರೆ.