ನವಿಲು ಸಾಂಬಾರ್​ ರೆಸಿಪಿ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಯೂಟ್ಯೂಬರ್​ಗೆ ಬಿಗ್​ ಶಾಕ್​!​

Peacock Curry
Published on

ಹೈದರಾಬಾದ್​: ಯೂಟ್ಯೂಬ್​​ ಕ್ರೇಜ್​ ಹುಟ್ಟಿಕೊಂಡ ಮೇಲಂತೂ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಡಿಯೋ ಮಾಡಲು ಶುರು ಮಾಡಿದ್ದಾರೆ. ಆದರೆ, ಕೆಲವರು ಕಾನೂನುಗಳನ್ನು ಮರೆತು ಏನೇನೋ ವಿಡಿಯೋ ಮಾಡಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇತ್ತೀಗಷ್ಟೇ ಉತ್ತರ ಪ್ರದೇಶದಲ್ಲಿ ಯುವಕನೊಬ್ಬ ರೈಲಿನ ಹಳಿಯ ಮೇಲೆ ಗ್ಯಾಸ್​ ಸಿಲಿಂಡರ್​, ಕಲ್ಲು ಮತ್ತು ಸೈಕಲ್​ ಮುಂತಾದವುಗಳನ್ನು ಇಟ್ಟು ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದ. ಇದೀಗ ಮತ್ತೊಬ್ಬ ಯೂಟ್ಯೂಬರ್​ ಅದೇ ರೀತಿ ಕುಚೇಷ್ಠೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ತೆಲಂಗಾಣದ ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ತಂಗಲ್ಲಪಲ್ಲಿ ಮಂಡಲ ನಿವಾಸಿಯಾಗಿರುವ ಯೂಟ್ಯೂಬರ್ ಕೋಡಂ ಪ್ರಣಯ್​, ಸಾಂಪ್ರದಾಯಿಕ ರೀತಿಯಲ್ಲಿ ನವಿಲು ಸಾಂಬಾರ್​ ಮಾಡುವುದು ಹೇಗೆ ಎಂಬ ಪಾಕವಿಧಾನವನ್ನು ತನ್ನ ಯೂಟ್ಯೂಬ್‌ ಚಾನಲ್​ನಲ್ಲಿ ಅಪ್‌ಲೋಡ್ ಮಾಡಿದ್ದ. ಅಷ್ಟೇ ಅಲ್ಲ, ಥಂಬ್‌ನೈಲ್​ನಲ್ಲಿ ನವಿಲು ಚಿತ್ರವನ್ನು ಹಾಕಿ ಅಪ್​ಲೋಡ್​ ಮಾಡಿದ್ದ.

ಈ ವಿಡಿಯೋ ನೋಡಿದ ನೆಟ್ಟಿಗರು ಕೋಡಂ ಪ್ರಣಯ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಯಾವಾಗ ಭಾರಿ ವಿರೋಧ ವ್ಯಕ್ತವಾಗಿದೆ ಎಂಬ ಗೊತ್ತಾಯಿತೋ ತಕ್ಷಣ ವಿಡಿಯೋವನ್ನು ಯೂಟ್ಯೂಬ್​ನಿಂದ ಪ್ರಣಯ್​ ಡಿಲೀಟ್​ ಮಾಡಿದ್ದಾರೆ. ಆದರೂ ಅಷ್ಟರಲ್ಲೇ ಈ ವಿಷಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿದಿದೆ. ಇದೀಗ ಪ್ರಣಯ್ ನನ್ನು ವಶಕ್ಕೆ ಪಡೆದು ಆತನಿಂದ ನವಿಲು ಗರಿ ಹಾಗೂ ಸಾಂಬರ್​ ಅನ್ನು ವಶಪಡಿಸಿಕೊಂಡಿದ್ದಾರೆ.

ಸದ್ಯ ವಶಕ್ಕೆ ಪಡೆದಿರುವುದನ್ನು ಅಧಿಕಾರಿಗಳು ಲ್ಯಾಬ್‌ಗೆ ಕಳುಹಿಸಿದ್ದಾರೆ. ಒಂದು ವೇಳೆ ಅದು ನವಿಲು ಖಾದ್ಯ ಎಂಬುದು ಕಂಡುಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net