

ತಿರುವನಂತಪುರಂ: ದೂರು ಕೊಡಲು ಬಂದ ತಂದೆ-ಮಗಳ ಜತೆಯಲ್ಲಿ ತಿರುವನಂತಪುರಂನ ನೆಯ್ಯಡ್ರಾಮ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಅಸಭ್ಯವಾಗಿ ವರ್ತಿಸಿದ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ.
ಗ್ರೇಡ್ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಗೋಪಕುಮಾರ್ ಅಮಾನತ್ತಾದ ಅಧಿಕಾರಿ. ಶನಿವಾರ ಅಮಾನತ್ತು ಮಾಡಲಾಗಿದ್ದು, ಅಧಿಕಾರಿ ವಿರುದ್ಧ ತನಿಖೆಗೆ ಆದೇಶ ಹೊರಡಿಸಲಾಗಿದೆ.
ನ. 24ರಂದು ತಿರುವನಂತಪುರಂನ ನಿವಾಸಿ ಸುದೇವನ್ ಮತ್ತು ಆತನ ಮಗಳು ದೂರು ನೀಡಲು ಠಾಣೆಗೆ ಬಂದಿದ್ದರು. ಇನ್ನೊಬ್ಬ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲು ಬಂದಿದ್ದರು. ಈ ವೇಳೆ ಪ್ರಕರಣ ದಾಖಲಿಸಿಕೊಳ್ಳಲು ಎಸ್ಐ ಹಿಂದೇಟು ಹಾಕಿದ್ದಾರೆ. ಇದು ವಾಗ್ವಾದಕ್ಕೆ ಕಾರಣವಾಗಿದ್ದು, ಎಸ್ಐ ಸಂಯಮ ಕಳೆದುಕೊಂಡು ವರ್ತಿಸಿರುವುದನ್ನು ಸುದೇವನ್ ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಮಫ್ತಿಯಲ್ಲಿರುವ ಪೊಲೀಸ್ ಠಾಣೆಯ ಮುಂಭಾಗ ನಿಂತು ತಂದೆ-ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಪೊಲೀಸರೇ ಬೆದರಿಸಿದರೆ ದೂರು ನೀಡಲು ಯಾರು ಮುಂದೆ ಬರುತ್ತಾರೆ ಎಂದು ಸುದೇವನ್ ಅಸಹಾಯಕರಾಗಿ ಮಾತನಾಡಿರುವುದು ವಿಡಿಯೋದಲ್ಲಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಸ್ಐ ಹೌದು, ಇಲ್ಲಿ ಇದೇ ದಾರಿ ಎಂದು ದುರಹಂಕಾರದ ಮಾತುಗಳನ್ನಾಡಿದ್ದಾರೆ. ಕೊನೆಯಲ್ಲಿ ಎಸ್ಐ ಅಸಭ್ಯ ವರ್ತನೆಯಿಂದ ಬೇಸತ್ತ ಸುದೇವನ್ ಮಗಳು ಅಲ್ಲಿಂದ ಹೊರಡೋಣ ಎಂದು ತಂದೆಗೆ ಹೇಳುವುದು ವಿಡಿಯೋದಲ್ಲಿದೆ. ಅಲ್ಲದೆ, ಮಹಿಳೆ ವಿರುದ್ಧ ಎಸ್ಐ ಅಶ್ಲೀಲ ಪದಪ್ರಯೋಗ ಮಾಡಿದ್ದು, ಆಕೆಯ ಅಳುತ್ತಿರುವುದು ಸಹ ಸೆರೆಯಾಗಿದೆ.
ದೂರು ದಾಖಲಿಸದೆ ತಂದೆಯ ಮುಂದೆಯೇ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿರುವ ಎಸ್ಐ ನಡವಳಿಕೆ ಸರಿಯಲ್ಲ ಎಂದು ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ. (ಏಜೆನ್ಸೀಸ್)