

ಮಂಗಳೂರು: ಪರಸ್ತ್ರೀ ಜತೆ ಅಪ್ಪ ದೈಹಿಕ ಸಂಪರ್ಕ ನಡೆಸಿದ್ದ ವಿಡಿಯೋ ವೈರಲ್ ಆಗಿದ್ದು, ಅದರಿಂದ ಮನನೊಂದ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಮೂಡಬಿದಿರೆ ಬಳಿಯ ತೋಡಾರಿನ ಸುಮಂತ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತನ ತಂದೆ ಪರಸ್ತ್ರೀ ಜತೆ ದೈಹಿಕ ಸಂಪರ್ಕ ನಡೆಸಿದ್ದ ಒಂದು ವರ್ಷದ ಹಿಂದಿನ ಘಟನೆ ಕುರಿತ ವಿಡಿಯೋ ವೈರಲ್ ಆಗಿತ್ತು. ಮೂರು ದಿನಗಳ ಹಿಂದೆ ಇದನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿತ್ತು.
ವಿಡಿಯೋ ನೋಡಿದ್ದ ಮಗ ಸುಮಂತ್, ತಂದೆಯ ಜೊತೆಗೆ ಜಗಳವಾಡಿದ್ದ. ಅಲ್ಲದೆ ತೀವ್ರ ಮುಜುಗರಕ್ಕೆ ಒಳಗಾಗಿ ಮನನೊಂದು ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮತ್ತು ವಿಡಿಯೋ ಹರಿಬಿಟ್ಟ ಬಗ್ಗೆ ಮೂಡಬಿದಿರೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ವಿಡಿಯೋ ವೈರಲ್ಗೆ ಕಾರಣವಾಗಿದ್ದ ಜಯಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.