

ಬೆಳಗಾವಿ: ಚಿಕ್ಕವಯಸ್ಸಿನವರು ಅದರಲ್ಲೂ ನಿಯಮಿತ ವ್ಯಾಯಾಮ ಇತ್ಯಾದಿ ಮಾಡುತ್ತಿರುವವರು ಕೂಡ ಹೃದಯಾಘಾತದಿಂದ ಸಾವಿಗೀಡಾಗುತ್ತಿರುವ ಪ್ರಕರಣ ನಡೆದಿದೆ. ಮೊನ್ನೆಯಷ್ಟೇ 27 ವರ್ಷದ ಯುವಕ ಹೃದಯಾಘಾತಕ್ಕೆ ಬಲಿಯಾಗಿದ್ದು, ಇಂದು 29 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್ಟೆಬಲ್ ಮೆಹಬೂಬ್ ರೇಶ್ಮಿ (29) ಮೃತಪಟ್ಟವರು. ಇಂದು ಬೆಳಗ್ಗೆ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಇವರು ಎದೆನೋವು ಬಂದ ಕಾರಣ ಮನೆಗೆ ತೆರಳಿದ್ದರು. ನಂತರ ಕೆಲವೇ ಹೊತ್ತಲ್ಲಿ ಅವರ ಮನೆಯಿಂದ ಠಾಣೆಗೆ ಕರೆಬಂದಿದ್ದು, ಸಹೋದ್ಯೋಗಿಗಳು ಬಂದು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಹೃದಯಾಘಾತಕ್ಕೀಡಾಗಿ ಮೃತಪಟ್ಟರು.
ಮೆಹಬೂಬ್ ಪತ್ನಿ ಕೂಡ ಪೊಲೀಸ್ ಆಗಿದ್ದು, ಇಬ್ಬರೂ ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಮೆಹಬೂಬ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೆಹಬೂಬ್ ನಿಧನಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಸಹೋದ್ಯೋಗಿ ಅಧಿಕಾರಿ-ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.