

ಎಲ್ಲ ಹಾವುಗಳಿಗಿಂತ ನಾಗರಹಾವು ವಿಷಕಾರಿ. ಅದೆಷ್ಟೋ ಜನರಿಗೆ ನಾಗರಹಾವನ್ನು ನೋಡಿದರೇ ನಡುಕ ಶುರುವಾಗುತ್ತದೆ. ಒಂದು ಅಧ್ಯಯನದ ಪ್ರಕಾರ ನಾಗರಹಾವು ಕಚ್ಚಿ, ಅದರ ವಿಷ ಏರಿ ಸಾಯುವವರಿಗಿಂತ, ಅಯ್ಯೋ...ನಮಗೆ ಸರ್ಪ ಕಚ್ಚಿಬಿಟ್ಟಿತಲ್ಲಾ ಎಂದು ಭಯದಿಂದ ಹೃದಯಾಘಾತವಾಗಿ ಮರಣಹೊಂದುವವರ ಸಂಖ್ಯೆಯೇ ಹೆಚ್ಚಂತೆ...!
ಆದರೆ ಇಲ್ಲೊಬ್ಬರು ಅಜ್ಜಿಗೆ ನಾಗರಹಾವು ಎಂದರೆ ಸ್ವಲ್ಪವೂ ಭಯವಿಲ್ಲ. ಈ ವೃದ್ಧೆ ನಾಗರಹಾವಿನ ಬಾಲವನ್ನು ಹಿಡಿದುಕೊಂಡು ದರದರನೇ ಎಳೆದುಕೊಂಡು ಹೋಗುವ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ.
ಐಎಫ್ಎಸ್ ಅಧಿಕಾರಿ ಸುಸಾಂತಾ ನಂದಾ ಅವರು ತಮ್ಮ ಟ್ವಿಟರ್ನಲ್ಲಿ ಈ ಅಜ್ಜಿ ಹಾವನ್ನು ಎಳೆದುಕೊಂಡು ಹೋಗುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ' ಅಜ್ಜಿ, ನಾಗರಹಾವನ್ನು ಹಿಡಿದುಕೊಳ್ಳುವ ವಿಧಾನ ಇದಲ್ಲ...ಹೀಗೆಲ್ಲ ಎಳೆಯುತ್ತಾರಾ?' ಎಂದು ದಿಗಿಲುಗೊಳ್ಳುವ ಇಮೋಜಿ ಹಾಕಿ ಕ್ಯಾಪ್ಷನ್ ಬರೆದಿದ್ದಾರೆ.
ಓರ್ವ ಅಜ್ಜಿ ಲಗುಬಗೆಯಿಂದ ಹೆಜ್ಜೆಹಾಕುತ್ತ ರಸ್ತೆಗೆ ಬರುತ್ತಾರೆ. ಅವರ ಕೈಯಲ್ಲಿ ನಾಗರಹಾವು ಇದೆ. ಹಾವಿನ ಬಾಲ ಅವರ ಕೈಯಲ್ಲಿದ್ದರೆ, ಅದರ ತಲೆ ನೆಲದಮೇಲೆ ಇದೆ. ಯಾವುದೇ ಭಯವಿಲ್ಲದೆ ಅದನ್ನು ದರದರನೆ ಎಳೆದುಕೊಂಡು ಹೋಗಿ ಅಲ್ಲಿಯೇ ಪಕ್ಕ ಮರಗಿಡಗಳು ಜಾಸ್ತಿ ಇರುವ ಸ್ಥಳದಲ್ಲಿ ಎಸೆಯುವುದನ್ನು 26 ಸೆಕೆಂಡ್ಗಳ ವಿಡಿಯೋದಲ್ಲಿ ನೋಡಬಹುದು.
ಸುಸಾಂತಾ ನಂದಾ ಅವರು ಪೋಸ್ಟ್ ಮಾಡಿದ ಈ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ. ಒಂದೂವರೆ ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ. ಅನೇಕರು ಕಾಮೆಂಟ್ ಮಾಡಿದ್ದಾರೆ. ವೃದ್ಧೆಯ ಧೈರ್ಯವನ್ನು ನೋಡಿ ಶಾಕ್ ಆಗಿದ್ದಾರೆ. ಆದರೆ ಈ ಅಜ್ಜಿ ಯಾರು? ಇದು ಯಾವ ಸ್ಥಳ ಎಂಬ ಬಗ್ಗೆ ಮಾಹಿತಿ ಇಲ್ಲ. (ಏಜೆನ್ಸೀಸ್)