

ಶ್ರೀನಗರ : ಭಾರತದ ಕ್ರೀಡಾ ಮತ್ತು ಯುವಜನ ಸೇವಾ ಸಚಿವರಾದ ಕಿರೆನ್ ರಿಜಿಜು ಅವರು ಶ್ರೀನಗರದ ಬೆಟ್ಟದ ಮೇಲಿನ ರಸ್ತೆಯಲ್ಲಿ ಓಡುತ್ತಿರುವ ತಮ್ಮ ವಿಡಿಯೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸುಮಾರು 5,400 ಅಡಿ ಎತ್ತರದಲ್ಲಿ ಅಪ್ಹಿಲ್ ರನ್ನಿಂಗ್ ಮಾಡುತ್ತಿರುವ ರಿಜಿಜು, ಇದಕ್ಕೆ 'ಫಿಟ್ ಇಂಡಿಯಾ ಮೂವ್ಮೆಂಟ್' ಮತ್ತು 'ನ್ಯೂ ಇಂಡಿಯಾ ಫಿಟ್ ಇಂಡಿಯಾ' ಎಂಬ ಹ್ಯಾಷ್ ಟ್ಯಾಗ್ಗಳನ್ನು ಹಾಕಿದ್ದಾರೆ.
"ಯಾವುದೇ ಸ್ಥಳದಲ್ಲಿರಲಿ, ಯಾವುದೇ ಸಮಯವಾಗಿರಲಿ, ದೇಹದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು" ಎಂದಿರುವ ರಿಜಿಜು, ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆಯ ವ್ಯಾಯಾಮ ಮಾಡಿ ಎಂದು ಕರೆ ನೀಡಿದ್ದಾರೆ. "ಎಲ್ಲಾ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಫಿಟ್ನೆಸ್ಸೇ ಪರಿಹಾರ" ಎಂದಿದ್ದಾರೆ.
ವಿಡಿಯೋದಲ್ಲಿ ಹಿನ್ನೆಲೆಯಲ್ಲಿ 'ಖೇಲೋ ಇಂಡಿಯಾ ದುನಿಯಾ ಕೋ ಜೀತೋ' ಎಂಬ ಸ್ಫೂರ್ತಿದಾಯಕ ಹಿಂದಿ ಹಾಡು ಕೇಳಿಬರುತ್ತದೆ. "ಫಿಟ್ನೆಸ್ ಕಾ ಡೋಸ್ ಆಧಾ ಘಂಟಾ ರೋಜ್" ಎಂಬ ಧ್ಯೇಯಮಂತ್ರವನ್ನೂ ನೀಡಿರುವ ಕ್ರೀಡಾ ಸಚಿವರ ಈ ವಿಡಿಯೋ ನೋಡಿ, ನಿಮಗೂ ಪ್ರತಿದಿನ ವ್ಯಾಯಾಮ ಮಾಡಲು ಉತ್ಸಾಹ ಬರಲಿ! (ಏಜೆನ್ಸೀಸ್)