ಗಣೇಶ ಮೂರ್ತಿಯ ಮೆರವಣಿಗೆ ವೇಳೆ ಬುರ್ಖಾ ಧರಿಸಿ ಡಾನ್ಸ್​ ಮಾಡಿದ ಯುವಕನ ಬಂಧನ

TN Young Man
Published on

ಚೆನ್ನೈ: ಗಣೇಶ ಚತುರ್ಥಿ ಆಚರಣೆಯ ವೇಳೆ ಯುವಕನೊಬ್ಬ ಬುರ್ಖಾ ಧರಿಸಿ ಡಾನ್ಸ್​ ಮಾಡಿರುವ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಆರೋಪಿ ಯುವಕನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ವೆಲ್ಲೂರಿನಲ್ಲಿ ನಡೆದಿದೆ.

ಸೆ. 21 ಗಣೇಶ ಮೂರ್ತಿಯ ಮೆರವಣಿಗೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬುರ್ಖಾ ಧರಿಸಿ ಮೆರವಣಿಗೆಯ ಬೀದಿಯಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಪೊಲೀಸರು ಸಾರ್ವಜನಿಕರಿಂದ ದೂರು ಸ್ವೀಕರಿಸಿದ್ದರು. ದೂರಿನ ಆಧಾರದ ಮೇಲೆ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತನನ್ನು ವಿರುಥಂಪಟ್ಟು ಮೂಲದ ಅರುಣ್​ಕುಮಾರ್​ ಎಂದು ಗುರುತಿಸಲಾಗಿದೆ. ಎರಡು ಗುಂಪುಗಳ ನಡುವೆ ದ್ವೇಷ ಉಂಟು ಮಾಡುವ ದುರುದ್ದೇಶದಿಂದಲೇ ಆರೋಪಿ ಅರುಣ್​ಕುಮಾರ್​ ಡಾನ್ಸ್​ ಮಾಡಿರುವ ಆರೋಪ ಕೇಳಿಬಂದಿದೆ.

ಯಾರೇ ಆಗಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಯತ್ನಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಇತರರ ಪತ್ತೆಗೆ ಪೊಲೀಸರು ಮುಂದಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net