VIDEO | ತಾಯಿಯನ್ನು ಹೆಗಲ ಮೇಲೆ ಹೊತ್ತು ಹೆಜ್ಜೆ ಹಾಕಿದ ಆಧುನಿಕ ಶ್ರವಣಕುಮಾರ; ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ

Kanwar Yatra
Published on

ನವ ದೆಹಲಿ: ಪ್ರತಿ ವರ್ಷ ಶಿವನ ಭಕ್ತರು 'ಕನ್ವರ್ ಯಾತ್ರೆ' ಆಯೋಜಿಸುತ್ತಾರೆ. ಈ ಯಾತ್ರೆಯು ಉತ್ತರಾಖಂಡದ ಹರಿದ್ವಾರದಲ್ಲಿ ಪ್ರಾರಂಭವಾಗುತ್ತದೆ. ಇಲ್ಲಿ ಯಾತ್ರಿಕರು ಗಂಗೆಯಿಂದ ಪವಿತ್ರ ನೀರನ್ನು ಸಂಗ್ರಹಿಸಿ, ನಂತರ ತಮ್ಮ ರಾಜ್ಯಗಳಲ್ಲಿರುವ ಶಿವ ದೇವಾಲಯಗಳಿಗೆ ಕೊಂಡೊಯ್ಯುತ್ತಾರೆ. ನೀರು ತರಲು ಉತ್ತರಾಖಂಡದ ಗೌಮುಖ, ಗಂಗೋತ್ರಿ ಮತ್ತು ಬಿಹಾರದ ಸುಲ್ತಂಗಂಜ್‌ನಂತಹ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆಧ್ಯಾತ್ಮಿಕ ಅನ್ವೇಷಣೆ ಮತ್ತು ಶಿವನಿಗೆ ಸಮರ್ಪಿತವಾದ ದೇವಾಲಯಗಳಲ್ಲಿ ಪವಿತ್ರ ನೀರನ್ನು ಅರ್ಪಿಸಲು ನೂರಾರು ಕಿಲೋಮೀಟರ್‌ಗಟ್ಟಲೇ ಕಾಲ್ನಡಿಗೆಯಲ್ಲಿ ಯಾತ್ರಿಕರು ಪ್ರಯಾಣಿಸುವುದು ಈ ಯಾತ್ರೆಯ ವಿಶೇಷ.

ಈ ವರ್ಷ ಕನ್ವರ್ ಯಾತ್ರೆ ಜುಲೈ 4 ರಂದು ಪ್ರಾರಂಭವಾಗಿ, ಜುಲೈ 15 ರವರೆಗೆ ಮುಂದುವರಿಯುತ್ತದೆ. ಈ ವರ್ಷ ಸುಮಾರು ಎರಡು ಮಿಲಿಯನ್ ಶಿವ ಭಕ್ತರು ಈ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಜನರು ಯಾತ್ರೆಯಲ್ಲಿ ಪಾಲ್ಗೊಳ್ಳುವಾಗ ಬರಿಗಾಲಿನಲ್ಲಿ, ಭಾರವಾದ ಹೊರೆ ಹೊತ್ತು ಪ್ರಯಾಣಿಸುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ವೈರಲ್ ಆಗಿವೆ.

ಆದರೆ ಈ ಬಾರಿ ಯಾತ್ರೆಯಲ್ಲಿ ಭಕ್ತರೊಬ್ಬರು ಹಲವರ ಗಮನ ಸೆಳೆದರು. ಹೌದು, ಹರಿದ್ವಾರದಲ್ಲಿ ಪವಿತ್ರ ಗಂಗಾ ನದಿಯಿಂದ ಒಂದೆಡೆ ನೀರನ್ನು ಮತ್ತು ಮತ್ತೊಂದೆಡೆ ತಾಯಿಯನ್ನು ಹೆಗಲ ಮೇಲೆ ಹೊತ್ತೊಯ್ಯುತ್ತಿರುವ ಯುವಕನ ಫೋಟೋಗಳು ಈಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.


"ಹರಿದ್ವಾರದಲ್ಲಿ ಯುವಕನೊಬ್ಬ ತನ್ನ ತಾಯಿಯನ್ನು ಒಂದು ಭುಜದ ಮೇಲೆ ಮತ್ತು ಇನ್ನೊಂದು ಭುಜದ ಮೇಲೆ ಗಂಗಾ ನದಿಯ ನೀರನ್ನು ಹೊತ್ತುಕೊಂಡು ಹೋಗುತ್ತಿದ್ದಾನೆ " ಎಂದು ಸುದ್ದಿ ಸಂಸ್ಥೆ ಎಎನ್ಐ ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೋದ ಜೊತೆಗೆ ಪೋಸ್ಟ್ ಮಾಡಿದೆ. ಜುಲೈ 4 ರಂದು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋ ಈ ತನಕ 42,000 ವೀಕ್ಷಣೆ ಮತ್ತು 1,800 ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.

ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ…
ವಿಡಿಯೋ ನೋಡಿದ ಟ್ವಿಟರ್ ಬಳಕೆದಾರರು "ಹರ ಹರ ಮಹಾದೇವ್", "ಜೈ ಹೋ," ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ. ಹೆಚ್ಚಿನವರು ಮಡಿಚಿದ ಕೈಗಳ ಇಮೋಟಿಕಾನ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net