

ರಾಂಚಿ: ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಇಂಡಿಯಾ ಒಕ್ಕೂಟ ಮತ್ತೊಮ್ಮೆ ಅಧಿಕಾರಕ್ಕೆ ಏರುವಲ್ಲಿ ಯಶಸ್ವಿಯಾಗಿದೆ. 81 ಸದಸ್ಯಬಲದ ವಿಧಾನಸಭೆಯಲ್ಲಿ ಇಂಡಿಯಾ ಒಕ್ಕೂಟ 56 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ. (ಬಹುಮತಕ್ಕೆ ಬೇಕಾದ ಸಂಖ್ಯೆ 41) ಎನ್ಡಿಎ 24 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದು, ಮತ್ತೊಂದು ಅವಧಿಗೆ ಪ್ರತಿಪಕ್ಷದಲ್ಲಿ ಕೂರಲಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಜೈಲುಪಾಲಾಗಿದ್ದರಿಂದ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದ ಹೇಮಂತ್ ಸೊರೇನ್ ಜುಲೈನಲ್ಲಿ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಿದ್ದಂತೆ ಮತ್ತೆ ಮುಖ್ಯಮಂತ್ರಿಯಾದರು. ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಹೇಮಂತ್ ಸೊರೇನ್ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನ ಏರುವುದು ಬಹುತೇಕ ಖಚಿತವಾಗಿದೆ. ಆದಿವಾಸಿಗಳ ಮತ ಸೆಳೆಯುವಲ್ಲಿ ಜೆಎಂಎಂ ತಂತ್ರಗಾರಿಕೆ ಯಶಸ್ವಿಯಾಗಿದೆ. ಜಾರ್ಖಂಡ್ನಲ್ಲಿ ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಶೇಕಡ 68ರಷ್ಟು ಮತದಾನವಾಗಿತ್ತು. ಇದು ರಾಜ್ಯದಲ್ಲಿ ಈವರೆಗಿನ ಗರಿಷ್ಠ ಮತದಾನ ಪ್ರಮಾಣವಾಗಿದೆ.
ದಡ ಸೇರಿಸಿದ ಸೊರೇನ್ ದಂಪತಿ
ಜಾರ್ಖಂಡ್ನಲ್ಲಿ ಬಿಜೆಪಿಯ ಆಕ್ರಮಣಶೀಲ ಹೋರಾಟದ ನಡುವೆಯೂ ಜನಮನ ಗೆಲ್ಲುವಲ್ಲಿ ಯಶಸ್ವಿಯಾದ ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ, ಮುಖ್ಯಮಂತ್ರಿ ಹೇಮಂತ್ ಸೊರೇನ್ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವ ಮೂಲಕ ಬಿಜೆಪಿಯ ಗೆಲುವಿನ ಕನಸಿಗೆ ತಣ್ಣೀರೆರಚಿದ್ದಾರೆ. ಹೇಮಂತ್ ಸೊರೇನ್ ಮತ್ತು ಪತ್ನಿ, ಶಾಸಕಿ ಕಲ್ಪನಾ ಸೊರೇನ್ ಇಬ್ಬರೂ ವ್ಯವಸ್ಥಿತ ತಂತ್ರಗಾರಿಕೆ ಹಾಗೂ ಪ್ರಚಾರದ ಮೂಲಕ ಜೆಎಂಎಂ ನೇತೃತ್ವದ ಕಾಂಗ್ರೆಸ್ ಒಳಗೊಂಡ ಇಂಡಿಯಾ ಒಕ್ಕೂಟ ಗೆಲುವಿನ ನಗೆ ಬೀರುವಂತೆ ಮಾಡಿದ್ದಾರೆ.
ಹೇಮಂತ್-ಕಲ್ಪನಾ ಜೋಡಿಯನ್ನು ಬಿಜೆಪಿ ‘ಬಂಟಿ ಔರ್ ಬಬ್ಲಿ’ ಎಂದು ವ್ಯಂಗ್ಯವಾಡಿದರೂ, ಈ ಇಬ್ಬರ ಜೋಡಿ ನಾಯಕತ್ವ ಕೇಸರಿಪಡೆ ಲೆಕ್ಕಾಚಾರ ತಲೆಕೆಳಗು ಮಾಡಿದೆ. ಪತಿಯನ್ನು ಹಣಕಾಸು ಅವ್ಯವಹಾರದ ಇ.ಡಿ. ಕೇಸ್ನಲ್ಲಿ ಬಂಧಿಸಿದ ಬಳಿಕ ರಾಜಕೀಯ ಪ್ರವೇಶಿಸಿದ ಕಲ್ಪನಾ, ಚುನಾವಣೆ ದಿನಾಂಕ ಘೊಷಣೆಯಾದ ಬಳಿಕ 200ಕ್ಕೂ ಹೆಚ್ಚು ಪ್ರಚಾರ ರ್ಯಾಲಿಗಳನ್ನು ನಡೆಸಿ, ಪತಿಗೆ ಹೆಗಲುಕೊಟ್ಟು ಪಕ್ಷದ ಗೆಲುವಿಗೆ ಕಾರಣರಾಗಿದ್ದಾರೆ.
ಹೇಮಂತ್ ಸೊರೇನ್ ಜೈಲಿನಿಂದ ಹೊರಬಂದು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತ ಸಿಎಂ ಸ್ಥಾನದಲ್ಲಿದ್ದ ಚಂಪೈ ಸೊರೇನ್ ಬಿಜೆಪಿ ಸೇರಿದ್ದರು. ಆದರೆ, ಚಂಪೈ ಬಿಜೆಪಿ ಸೇರ್ಪಡೆ ಈ ಚುನಾವಣೆಯಲ್ಲಿ ದೊಡ್ಡ ಮಟ್ಟಿಗೆ ಪಕ್ಷಕ್ಕೆ ಲಾಭ ತಂದುಕೊಡಲಿಲ್ಲ. ಚಂಪೈ ತಮ್ಮ ಕ್ಷೇತ್ರದಲ್ಲಿ ಗೆದ್ದಿರಬಹುದು, ಆದರೆ ಬಿಜೆಪಿ ರಾಜ್ಯದಲ್ಲಿ ಸೋತಿದೆ. ಬಾಂಗ್ಲಾದೇಶ ನುಸುಳುಕೋರರು, ಆದಿವಾಸಿ ಮಹಿಳೆಯರನ್ನು ನುಸುಳುಕೋರರು ವಿವಾಹವಾಗುತ್ತಿರುವುದು, ಸೊರೇನ್ ತುಷ್ಟೀಕರಣ ರಾಜಕೀಯ ಮಾಡುತ್ತಾರೆ ಎಂದೆಲ್ಲ ಬಿಜೆಪಿ ಪ್ರಚಾರ ಮಾಡಿದರೂ, ರ್ಯಾಲಿ, ಸಂದರ್ಶನಗಳಲ್ಲಿ ತಕ್ಕ ಉತ್ತರ ನೀಡುತ್ತಿದ್ದ ಸಿಎಂ ಸೊರೇನ್ ಈ ಮೂಲಕ ಜನರ ಮನಸ್ಸು ವಿಚಲಿತಗೊಳ್ಳದಂತೆ ನೋಡಿಕೊಂಡರು. ಬಾಂಗ್ಲಾದೇಶದಿಂದ ಅಕ್ರಮ ವಲಸೆ ಹೆಚ್ಚಾಗುತ್ತಿದ್ದರೆ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್ ಏನು ಮಾಡುತ್ತಿದೆ, ಗೃಹ ಸಚಿವಾಲಯ ಕೈ ಕಟ್ಟಿ ಕೂತಿದೆಯೇ ಎಂದು ಮರು ಪ್ರಶ್ನೆಗಳನ್ನು ಹಾಕುತ್ತಿದ್ದರು. ಹೇಮಂತ್ ಸೊರೇನ್ ವಿರುದ್ಧ ಬಿಜೆಪಿ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದರೂ, ‘ನಾನು ಬುಡಕಟ್ಟು ಸಿಎಂ. ಹಾಗಾಗಿ ನನ್ನನ್ನು ಕೇಸುಗಳಲ್ಲಿ ಸಿಲುಕಿ ಹಾಕಿಸಲಾಗುತ್ತಿದೆ’ ಎಂಬ ನಿರೂಪಣೆಯನ್ನು ತೇಲಿಬಿಟ್ಟರು. ಲೋಕಸಭೆ ಚುನಾವಣೆಯಲ್ಲಿ ಮಾಡಿದ್ದಂತೆ, ಕೇಂದ್ರ ಸರ್ಕಾರ ಬುಡಕಟ್ಟು ವಿರೋಧಿ ಎಂದೂ ಪರಿಣಾಮಕಾರಿಯಾಗಿ ಪ್ರಚಾರ ಮಾಡಿದರು.
ಬಿಜೆಪಿ ಕೇಂದ್ರ ನಾಯಕತ್ವದ ಜತೆಗೆ ರಾಜ್ಯ ನಾಯಕರಾದ ಬಾಬುಲಾಲ್ ಮರಾಂಡಿ, ಅರ್ಜುನ್ ಮುಂಡಾ ಜೆಎಂಎಂ, ಕಾಂಗ್ರೆಸ್ ವಿರುದ್ಧ ನಿರೂಪಣೆ ರೂಪಿಸುವಲ್ಲಿ ಸೋತಿದ್ದಾರೆ. ರಾಜ್ಯ ಬಿಜೆಪಿಗೆ ಹೊಸ ಬುಡಕಟ್ಟು ನಾಯಕನ ಅಗತ್ಯವಿದೆ ಎಂಬ ಸಂದೇಶವನ್ನೂ ಈ ಫಲಿತಾಂಶ ರವಾನಿಸಿದೆ.
ಕಲ್ಪನಾ ಸೊರೇನ್ ಪ್ರಚಾರದುದ್ದಕ್ಕೂ ಸರ್ಕಾರದ ಮೈಯಾನ್ (ಮಹಿಳಾ) ಸಮ್ಮಾನ್ ಯೋಜನೆಯ ಲಾಭಗಳನ್ನು ವಿವರಿಸಿದ್ದರಿಂದ ಇದು ಮಹಿಳಾ ಮತಗಳನ್ನು ಪಕ್ಷದೊಂದಿಗೆ ಕಾಪಿಟ್ಟುಕೊಳ್ಳುವಲ್ಲಿ ನೆರವಾಯಿತು. ಕಳೆದ ಸಲಕ್ಕೆ ಹೋಲಿಸಿದರೆ ಮಹಿಳೆಯರು ಈ ಬಾರಿ ಶೇಕಡ 4ರಷ್ಟು ಹೆಚ್ಚು ಮತ ಚಲಾಯಿಸಿದ್ದಾರೆ. ಮೈಯಾನ್ ಸಮ್ಮಾನ್ ಯೋಜನೆಯಲ್ಲಿ 18-50 ವರ್ಷ ವಯಸ್ಸಿನ ಮಹಿಳೆಯರಿಗೆ ರೂ. 1,000 ಆರ್ಥಿಕ ಸಹಾಯ ನೀಡಲಾಗುತ್ತಿದೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಇದನ್ನು ರೂ. 2,500ಕ್ಕೆ ಏರಿಸುವುದಾಗಿ ಸೊರೇನ್ ಭರವಸೆ ನೀಡಿದ್ದರು.
ಹಲವು ಬಾರಿ ಸಿಎಂ: ಹೇಮಂತ್ ಸೊರೇನ್ ಅವರಿಗೆ ಹಲವು ಬಾರಿ ಸಿಎಂ ಹುದ್ದೆ ಒಲಿದು ಬಂದಿದೆ. 2013ರ ಜುಲೈನಿಂದ 2014ರ ಡಿಸೆಂಬರ್ವರೆಗೆ ಮೊದಲ ಬಾರಿ ಸಿಎಂ ಆದರು. 2019ರ ಡಿ.29ರಿಂದ 2024ರ ಜನವರಿ 31ರವರೆಗೆ 2ನೇ ಬಾರಿ ಸಿಎಂ ಆಗಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿ ಈ ವರ್ಷದ ಜುಲೈನಲ್ಲಿ 3ನೇ ಬಾರಿ ಸಿಎಂ ಆದರು. ಈಗ 4ನೇ ಬಾರಿ ಸಿಎಂ ಹೊಸ್ತಿಲಲ್ಲಿ.
ಸಮೀಕ್ಷೆಗಳು ಏನು ಹೇಳಿದ್ದವು?: ಜಾರ್ಖಂಡ್ ಚುನಾವಣೆ ಬಗ್ಗೆ 8 ಮತದಾನೋತ್ತರ ಸಮೀಕ್ಷೆ ಬಂದವು. ಈ ಪೈಕಿ 4 ಸಮೀಕ್ಷೆಗಳು ಎನ್ಡಿಎ ಮೈತ್ರಿಕೂಟ, 2 ಸಮೀಕ್ಷೆಗಳು ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲಿವೆ ಎಂದು ಹೇಳಿದರೆ, 2 ಸಮೀಕ್ಷೆಗಳು ಅತಂತ್ರ ವಿಧಾನಸಭೆ ಬಗ್ಗೆ ಭವಿಷ್ಯ ನುಡಿದಿದ್ದವು. ಆದರೆ, ಮತದಾ ನೋತ್ತರ ಸಮೀಕ್ಷೆಗಳು ಜಾರ್ಖಂಡ್ ವಿಷಯದಲ್ಲೂ ಸುಳ್ಳಾಗಿವೆ.
ಸೋತ ಪ್ರಮುಖರು
ಇಂಡಿಯಾ ಒಕ್ಕೂಟ ತುಂಬ ಒಳ್ಳೆಯ ಸಾಧನೆ ಮಾಡಿದೆ. ಇದಕ್ಕಾಗಿ ಹಗಲಿರುಳು ದುಡಿದ ಪಕ್ಷದ ಕಾರ್ಯಕರ್ತರು, ನಾಯಕರಿಗೆ ಧನ್ಯವಾದ. ಎಲ್ಲ ಸಮುದಾಯದ ಜನರಿಗೆ, ಆದಿವಾಸಿ ಬಂಧುಗಳಿಗೆ ಕೃತಜ್ಞತೆ. ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಶೀಘ್ರದಲ್ಲೇ ಆರಂಭಿಸಲಿದ್ದೇವೆ.
| ಹೇಮಂತ್ ಸೊರೇನ್ ಮುಖ್ಯಮಂತ್ರಿ