ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಗೆಲುವು: ಸಚಿವ ಎಂ.ಬಿ.ಪಾಟೀಲ

mb patil
Published on

ಬೆಂಗಳೂರು: ಪಕ್ಷದ ಹೈಕಮಾಂಡ್ ಮಹಾರಾಷ್ಟ್ರದ ಪಶ್ಚಿಮ ಭಾಗದ ಹಿರಿಯ ಚುನಾವಣಾ ವೀಕ್ಷಕರನ್ನಾಗಿ ತಮ್ಮನ್ನು ನೇಮಿಸಿದ್ದು, ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಇರುವ ಮೈತ್ರಿಕೂಟ (ಮಹಾವಿಕಾಸ ಅಘಾಡಿ) ಗೆಲುವು ಸಾಧಿಸಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವಿಶ್ವಾಸ ವ್ಯಕಪಡಿಸಿದ್ದಾರೆ.

ಸುದ್ದಿಗಾರರ ಜತೆಗೆ ಬುಧವಾರ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವು ಶಿವಸೇನೆಯ ಉದ್ಧವ್ ಠಾಕ್ರೆ ಬಣ ಮತ್ತು ಶರದ್ ಪವಾರ್ ಅವರ ಎನ್ಸಿಪಿ ಜತೆ ಮೈತ್ರಿ ಹೊಂದಿದೆ. ಅಲ್ಲಿ ಬಿಜೆಪಿ, ಸೇನೆ ಮತ್ತು ಶಿಂಧೆ ಅವರ ಸೇನಾ ಬಣಗಳ ವಿರುದ್ಧ ದೊಡ್ಡ ಆಡಳಿತ ವಿರೋಧಿ ಅಲೆ ಎದ್ದಿದೆ ಎಂದರು.

ಮಹಾರಾಷ್ಟ್ರದ ಚುನಾವಣೆಯಲ್ಲಿ ಅಲ್ಲಿನ ಸ್ಥಳೀಯ ವಿಚಾರಗಳು ನಿರ್ಣಾಯಕವಾಗಿವೆ. ಮುಡಾ ಪ್ರಕರಣಕ್ಕೂ ಮಹಾರಾಷ್ಟ್ರ ಚುನಾವಣೆಗೂ ಸಂಬಂಧವಿಲ್ಲ. ಆಡಳಿತವೈಖರಿ ನೋಡಿ ಮಹಾರಾಷ್ಟ್ರ ಮತದಾರರು ರೋಸಿ ಹೋಗಿದ್ದಾರೆ. ಬಿಜೆಪಿಯ ಅನೈತಿಕ ರಾಜಕಾರಣಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಸೊಲ್ಲಾಪುರ, ಸಾಂಗ್ಲಿ, ಕೊಲ್ಲಾಪುರ, ಮೀರಜ್ ಇತ್ಯಾದಿ ಕಡೆ ಮೊದಲಿನಿಂದ ತಮಗೆ ಒಡನಾಟವಿದೆ. ಹೀಗಾಗಿ ಪಕ್ಷ ಹಿರಿಯ ವೀಕ್ಷಕರನ್ನಾಗಿ ನೇಮಿಸಿದೆ ಎಂದೂ ಎಂ.ಬಿ.ಪಾಟೀಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net