

PM Modi: ಜಗದೀಪ್ ಧನಕರ್ ಅವರ ಹಠಾತ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಚುನಾವಣೆಗೆ ನಾಳೆ ಮಂಗಳವಾರ(ಸೆ. 09) ಮತದಾನ ನಡೆಯಲಿದ್ದು, ಆಡಳಿತರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ನಡುವೆ ಸ್ಪರ್ಧೆ ನಡೆಯಲಿದೆ.
ನಾಳೆ ಸಂಸತ್ನಲ್ಲಿ ನಡೆಯುವ ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮೊದಲ ಮತ ಚಲಾಯಿಸಲಿದ್ದಾರೆ. ಪಂಜಾಬ್ ಮತ್ತು ಹರಿಯಾಣ ಸಂಸದರೊಂದಿಗೆ ಪ್ರಧಾನಿ ಮತ ಚಲಾಯಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಉಪರಾಷ್ಟ್ರಪತಿ ಚುನಾವಣೆಗೆ ಕೇಂದ್ರ ಸಚಿವರಾದ ಕಿರಣ್ ರಿಜಿಜು, ರಾಮಮೋಹನ್ ನಾಯ್ಡು ಮತ್ತು ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಅವರನ್ನು ಚುನಾವಣಾ ಏಜೆಂಟ್‌ಗಳಾಗಿ ನೇಮಿಸಲಾಗಿದೆ.
ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನ ಜುಲೈ 21ರಂದು ಜಗದೀಪ್ ಧನಕರ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಆ ಹುದ್ದೆಗೆ ಚುನಾವಣೆ ಅನಿವಾರ್ಯವಾಯಿತು. ಈ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್ ಮತ್ತು ಇಂಡಿಯಾ ಕೂಟದ ಅಭ್ಯರ್ಥಿಯಾಗಿ ಬಿ. ಸುದರ್ಶನ್ ರೆಡ್ಡಿ ನಡುವೆ ಸ್ಪರ್ಧೆ ನಡೆದಿದೆ.
ಎನ್‌ಡಿಎ ಸಂಸದರಿಗೆ ಮೋದಿ ಭೋಜನ ಕೂಟ
ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಎನ್‌ಡಿಎ ಸಂಸದರಿಗೆ ಭೋಜನ ಕೂಟವನ್ನು ಆಯೋಜಿಸಿದ್ದು, ಸಭೆಯಲ್ಲಿ ಎಲ್ಲಾ ಸಂಸದರು ಮತದಾನದಲ್ಲಿ ಭಾಗವಹಿಸುವಂತೆ ಹೇಳಿದ್ದು, ಎನ್‌ಡಿಎ ಅಭ್ಯರ್ಥಿಗೆ ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ. ಜೊತೆಗೆ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಜಿಎಸ್‌ಟಿ ದರ ಕಡಿತದ ಕುರಿತು ವ್ಯಾಪಾರಿಗಳೊಂದಿಗೆ ಸಭೆ ನಡೆಸಲು 'ಸ್ವದೇಶಿ ಮೇಳ' ಆಯೋಜಿಸುವಂತೆ ಕರೆ ನೀಡಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ಉಪರಾಷ್ಟ್ರಪತಿಗಳನ್ನು ಆಯ್ಕೆ ಮಾಡುತ್ತಾರೆ. ಸಂವಿಧಾನದ 64 ಮತ್ತು 68 ನೇ ವಿಧಿಗಳ ನಿಬಂಧನೆಗಳ ಅಡಿಯಲ್ಲಿ ಉಪಾಧ್ಯಕ್ಷರ ಚುನಾವಣೆ ನಡೆಯುತ್ತಿದೆ. ಚುನಾವಣಾ ಆಯೋಗವು ಈ ಚುನಾವಣೆಯನ್ನು ಪ್ರಕಟಿಸಿದೆ. ಮತದಾನವನ್ನು ರಹಸ್ಯ ಮತದಾನದ ಮೂಲಕ ನಡೆಸಲಾಗುತ್ತದೆ. ಆದರೆ ಈ ಚುನಾವಣೆಯಲ್ಲಿ ಯಾವುದೇ ವಿಪ್ ಜಾರಿ ಇರುವುದಿಲ್ಲ. ಸಂಸದರು ತಮಗೆ ಇಷ್ಟ ಬಂದ ಅಭ್ಯರ್ಥಿಗೆ ಮತ ನೀಡಬಹುದು. (ಏಜೆನ್ಸೀಸ್)