

Vice Presidential Election: ಇತ್ತೀಚಿನ ಉಪರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಆದೇಶದ ಮೇರೆಗೆ ಎನ್‌ಡಿಎ ಅಭ್ಯರ್ಥಿಗೆ ಮತ ಹಾಕಿದ್ದಾಗಿ ಮೂವರು ಕಾಂಗ್ರೆಸ್ ಸಂಸದರು ಒಪ್ಪಿಕೊಂಡಿದ್ದಾರೆ ಎಂದು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕ ಪಾಡಿ ಕೌಶಿಕ್ ರೆಡ್ಡಿ ಮಂಗಳವಾರ (ಸೆ 16) ಆರೋಪಿಸಿದ್ದಾರೆ.
ರೇವಂತ್ ರೆಡ್ಡಿ ಅವರ ಸೂಚನೆಯ ಮೇರೆಗೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂದು ಮೂವರು ಕಾಂಗ್ರೆಸ್ ಸಂಸದರು ನನಗೆ ವೈಯಕ್ತಿಕವಾಗಿ ಹೇಳಿದ್ದು, ಪತ್ರಿಕಾಗೋಷ್ಠಿ ನಡೆಸಿ ಈ ವಿಷಯವನ್ನು ಬಹಿರಂಗಪಡಿಸುವಂತೆ ನನ್ನನ್ನು ಕೇಳಿದರು ಎಂದು ಕೌಶಿಕ್ ರೆಡ್ಡಿ ಹೇಳಿದ್ದಾರೆ. ರೇವಂತ್ ರೆಡ್ಡಿ ಅಡ್ಡ ಮತದಾನ ಮಾಡಿಸುವ ಮೂಲಕ ತೆಲಂಗಾಣ ಜನರ ಮತ್ತು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದರು
ಇದನ್ನೂ ಓದಿ:ಸರ್ಕಾರಿ ಕಾರಿಗೆ ಕಲ್ಲು ತೂರಿದ ಮಾನಸಿಕ ಅಸ್ವಸ್ಥ
ಮತದಾನ ಪ್ರಕ್ರಿಯೆ ಬಳಿಕ ಲೋಕಸಭೆ ಸ್ಪೀಕರ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ನಿತಿನ್ ಗಡ್ಕರಿ ಅವರನ್ನು ತೆಲಂಗಾಣ ಕಾಂಗ್ರೆಸ್ ಸಂಸದರು ಭೇಟಿ ಮಾಡಿದ್ದಾರೆ, ರಾಹುಲ್ ಗಾಂಧಿ ರಾಷ್ಟ್ರಮಟ್ಟದಲ್ಲಿ ಮತ ಕಳ್ಳತನದ ಬಗ್ಗೆ ಮಾತನಾಡುತ್ತಾರೆ, ಆದರೆ ತೆಲಂಗಾಣದ ಅವರ ಪಕ್ಷದ ಮುಖ್ಯಮಂತ್ರಿಯೇ ಮತಗಳನ್ನು ಕದಿಯುತ್ತಿದ್ದಾರೆ. ತಮ್ಮ ಹಿಂದಿನ ಮಾರ್ಗದರ್ಶಕರಾದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ನಡೆದುಕೊಂಡ ರೆಡ್ಡಿ, ಗುರುದಕ್ಷಿಣೆ ಸಲ್ಲಿಸಿದ್ದಾರೆ. ಇಂತಹ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನದ ಬಗ್ಗೆ ಚರ್ಚೆಗಳು ನಡೆದಿರುವ ಬೆನ್ನಲ್ಲೆ ಈ ಹೊಸ ಆರೋಪಗಳು ಬಂದಿದ್ದು. ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರು ವಿರೋಧ ಪಕ್ಷದ ಅಭ್ಯರ್ಥಿ ನ್ಯಾಯಮೂರ್ತಿ (ನಿವೃತ್ತ) ಬಿ ಸುದರ್ಶನ್ ರೆಡ್ಡಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮತದಾನಕ್ಕೆ ಅರ್ಹರಾಗಿರುವ 781 ಸಂಸದರಲ್ಲಿ 767 ಮಂದಿ ತಮ್ಮ ಮತ ಚಲಾಯಿಸಿದ್ದು, ಅದರಲ್ಲಿ 752 ಮತಗಳು ಮಾನ್ಯ ಎಂದು ಘೋಷಿಸಲಾಗಿದೆ. ಸಿ.ಪಿ. ರಾಧಾಕೃಷ್ಣನ್ 452 ಮತಗಳನ್ನು ಪಡೆದರೆ, ಬಿ. ಸುದರ್ಶನ್ ರೆಡ್ಡಿ 300 ಮತಗಳನ್ನು ಪಡೆದರು.
ಇದನ್ನು ಓದಿ:ಆಧುನಿಕ ತಂತ್ರಜ್ಞಾನದಲ್ಲಿ ಬೇಕಿದೆ ಪ್ರಗತಿ
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅಡ್ಡ ಮತದಾನದ ನಡೆಯನ್ನು ಅತ್ಯಂತ ಗಂಭೀರ ಎಂದು ಹೇಳಿಕೆ ನೀಡಿದ್ದು, ಇಂಡಿಯಾ ಮೈತ್ರಿಕೂಟದ ಪ್ರತಿಯೊಂದು ಪಕ್ಷವೂ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಬಿಜೆಪಿ ನಾಯಕರು ಹೆಚ್ಚುವರಿ ಮತಗಳನ್ನು ಆತ್ಮಸಾಕ್ಷಿಯೊಂದಿಗೆ ಹೋಲಿಕೆ ಮಾಡಿದ್ದು,ಇದು ವಿರೋಧ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದ ಪ್ರತಿರೂಪ ಎಂದು ಆರೋಪಿಸಿದರು.(ಏಜೆನ್ಸೀಸ್)