Operation Sindoor | ಟ್ರಂಪ್​​​​ಗೆ ಮುಖಭಂಗ; ಕದನ ವಿರಾಮದ ವಿಷಯದಲ್ಲಿ ಅಮೆರಿಕಾದ ಮಧ್ಯಸ್ಥಿಕೆಯನ್ನು ಭಾರತ ನಿರಾಕರಿಸಿದೆ ಎಂದ ಪಾಕ್ ವಿದೇಶಾಂಗ ಸಚಿವ!

Pak Minister
Published on

Operation Sindoor: ಪಾಕಿಸ್ತಾನದೊಂದಿಗಿನ ಕದನ ವಿರಾಮ ಸೇರಿದಂತೆ ಬೇರೆ ಯಾವ ವಿಷಯದಲ್ಲೂ ಭಾರತ, ಅಮೆರಿಕಾ ಒಳಗೊಂಡಂತೆ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಬೆಂಬಲಿಸಿಲ್ಲ ಎಂದು ಪಾಕ್ ವಿದೇಶಾಂಗ ಸಚಿವ ಮೊಹಮ್ಮದ್ ಇಶಾಕ್ ದಾರ್ ತಿಳಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಪಾಕ್ ವಿದೇಶಾಂಗ ಸಚಿವ ದಾರ್​, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಭಾರತದೊಂದಿಗೆ ಮಾತುಕತೆಯ ನಿರೀಕ್ಷೆಯ ಬಗ್ಗೆ ಮತ್ತು ಬ್ಯಾಕ್-ಚಾನೆಲ್ ಮಾತುಕತೆಗಳು ಪ್ರಾರಂಭವಾಗಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು, ಮೇ ತಿಂಗಳಲ್ಲಿ ಮತ್ತು ನಂತರ ಜುಲೈನಲ್ಲಿ ಆಪರೇಷನ್ ಸಿಂಧೂರ್ ಸಮಯದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಈ ವಿಷಯದ ಕುರಿತು ನಡೆಸಿದ ಸಂಭಾಷಣೆಗಳನ್ನು ವಿವರಿಸಿದರು.

ಅಂದು ನಡೆದಿದ್ದೇನು..?

ಮೇ 11 ರಂದು ಬೆಳಿಗ್ಗೆ 8.17 ಕ್ಕೆ ಕಾರ್ಯದರ್ಶಿ ರುಬಿಯೊ ಮೂಲಕ ಕದನ ವಿರಾಮದ ಪ್ರಸ್ತಾಪ ನನಗೆ ಬಂದಾಗ, ಶೀಘ್ರದಲ್ಲೇ, ನಿಮ್ಮ ಮತ್ತು ಭಾರತದ ನಡುವೆ ಸ್ವತಂತ್ರ ಸ್ಥಳದಲ್ಲಿ ಮಾತುಕತೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದರು, ಅದಾದ ನಂತರ ಜುಲೈ 25 ರಂದು ವಾಷಿಂಗ್ಟನ್‌ನಲ್ಲಿ ಕಾರ್ಯದರ್ಶಿ ರುಬಿಯೊ ಅವರೊಂದಿಗಿನ ದ್ವಿಪಕ್ಷೀಯ ಸಭೆಯ ಸಮಯದಲ್ಲಿ ನಾವು ಭೇಟಿಯಾದಾಗ, ಆ ಮಾತುಕತೆಗಳಿಗೆ ಏನಾಯಿತು? ಎಂದು ನಾನು ಅವರನ್ನು ಕೇಳಿದೆ, ಅವರು, ಭಾರತವು ಇದನ್ನು ದ್ವಿಪಕ್ಷೀಯ ವಿಷಯ ಎಂದು ಹೇಳುತ್ತಿದೆ ಎಂದಿರುವುದಾಗಿ ತಿಳಿಸಿದರು.

ಏಪ್ರಿಲ್ 20 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಾಗ, ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ನೆಲೆಸುವಂತೆ ಮಾಡಲು ಅಮೆರಿಕಾ ಮಧ್ಯವರ್ತಿಯಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಿರುವ ಹಿನ್ನೆಲೆಯಲ್ಲಿ ದಾರ್ ಅವರ ಹೇಳಿಕೆಗಳು ಬಂದಿವೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯವಾಗಿರಲಿವೆ ಎಂದು ಸ್ಪಷ್ಟವಾಗಿ ಹೇಳಿರುವ ಭಾರತ, ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಸದಾ ನಿರಾಕರಿಸುತ್ತಲೇ ಬಂದಿದೆ ಎಂದರು. ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನವು ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಬಾಗಿಲು ತಟ್ಟಿದೆ ಎಂಬುದನ್ನು ಇದೇ ವೇಳೆ ಒಪ್ಪಿಕೊಂಡರು.

ಮಾತುಕತೆಗೆ ಸಿದ್ಧ ಎಂದ ದಾರ್​​​

ಭಾರತದೊಂದಿಗಿನ ಮಾತುಕತೆಯ ಇಂಗಿತ ವ್ಯಕ್ತಪಡಿಸಿದ ದಾರ್​, ನಮಗೆ ಈ ವಿಷಯದಲ್ಲಿ ಅವರೊಂದಿಗೆ (ಭಾರತ) ಮಾತನಾಡಲು ಯಾವುದೇ ಅಭ್ಯಂತರವಿಲ್ಲ, ಸಂವಾದಗಳು ಸಮಗ್ರವಾಗಿರಬೇಕು, ಭಯೋತ್ಪಾದನೆ, ವ್ಯಾಪಾರ, ಆರ್ಥಿಕತೆ ಮತ್ತು ಜಮ್ಮು ಮತ್ತು ಕಾಶ್ಮೀರದ ಕುರಿತು ಚರ್ಚೆಗಳ ಬಗ್ಗೆ ಮಾತನಾಡಲು ಪಾಕ್​​ ಸಿದ್ಧವಿದೆ, ಆದರೆ ನಾವು ಯಾವುದಕ್ಕೂ ಬೇಡಿಕೊಳ್ಳುತ್ತಿಲ್ಲ, ಭಾರತವು ಸಂವಾದಕ್ಕೆ ತನ್ನ ಇಚ್ಛೆ ವ್ಯಕ್ತಪಡಿಸದ ಹೊರತು ನಾವು ಒತ್ತಾಯ ಮಾಡಲು ಸಾಧ್ಯವಿಲ್ಲ ಎಂದರು.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net