ಎನ್​ಡಿಎ ಅಭ್ಯರ್ಥಿಯಾಗಿ ಸಿಪಿ ರಾಧಾಕೃಷ್ಣನ್ ಕಣಕ್ಕೆ; ಯಾರಿವರು? ಇವರ ರಾಜಕೀಯ ಹಿನ್ನೆಲೆ ಏನು? ಇಲ್ಲಿದೆ ವಿವರ | Vice President Polls

ವಿಜಯವಾಣಿ (98)
Published on

Vice President Polls: ಇದೇ ಸೆಪ್ಟೆಂಬರ್ 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಇದೀಗ ಬಿಜೆಪಿ, ತಮ್ಮ ಎನ್​ಡಿಎ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಿದೆ.

'ಮಹಾ' ಗವರ್ನರ್ ಆಯ್ಕೆ

ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ತಮ್ಮ ಆಯ್ಕೆಯಾಗಿ ಪಕ್ಷವು ಘೋಷಿಸಿದೆ. ಈ ಹೆಸರೇ ಅಂತಿಮ ಎಂದು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅದ್ಯಕ್ಷ ಜೆಪಿ ನಡ್ಡಾ ತಿಳಿಸಿದರು. "ಮುಂದಿನ ಉಪರಾಷ್ಟ್ರಪತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ. ನಾವು ವಿರೋಧ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ್ದೇವೆ" ಎಂದು ನಡ್ಡಾ ಹೇಳಿದರು.

ರಾಧಾಕೃಷ್ಣನ್ ಅವರ ರಾಜಕೀಯ ಹಿನ್ನೆಲೆ

ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್, ಅಕ್ಟೋಬರ್ 20, 1957ರಲ್ಲಿ ಜನಿಸಿದರು. ಪ್ರಸ್ತುತ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಜುಲೈ 31, 2024ರಿಂದ ರಾಜ್ಯದ 24ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಫೆಬ್ರವರಿ 2023ರಿಂದ ಜುಲೈ 2024 ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ, ಮಾರ್ಚ್ ನಿಂದ ಜುಲೈ 2024ರವರೆಗೆ ತೆಲಂಗಾಣ ರಾಜ್ಯಪಾಲರಾಗಿ (ಹೆಚ್ಚುವರಿ ಸ್ಥಾನಮಾನ) ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ (ಹೆಚ್ಚುವರಿ ಸ್ಥಾನಮಾನ) ಸೇವೆ ಸಲ್ಲಿಸಿದ್ದಾರೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರಾಗಿ ಕೊಯಮತ್ತೂರಿನಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಈಗ ಮುಂದೇನು?

ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿದ ಜಗದೀಪ್ ಧನಕರ್, ಜುಲೈ 21ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ಅನಿರೀಕ್ಷಿತವಾಗಿ ರಾಜೀನಾಮೆ ಘೋಷಿಸಿದರು. ಇದು ರಾಜಕೀಯ ಭಿನ್ನಾಭಿಪ್ರಾಯಗಳ ಕುರಿತು ವ್ಯಾಪಕ ಊಹಾಪೋಹಗಳಿಗೂ ಕಾರಣವಾಯಿತು. ಇತ್ತ ಎನ್​ಡಿಎ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಅತ್ತ ವಿರೋಧ ಪಕ್ಷವಾದ ಇಂಡಿಯಾ ಬ್ಲಾಕ್ ಶೀಘ್ರದಲ್ಲೇ ತನ್ನ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆಯಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net