

Asia Cup 2025: ಏಷ್ಯಾ ಕಪ್ 2025ರ ಟೂರ್ನಿ ಆರಂಭಕ್ಕೂ ಮುನ್ನವೇ ವೈರಿ ರಾಷ್ಟ್ರ ಪಾಕ್ ಜತೆಗಿನ ಪಂದ್ಯಕ್ಕೆ ಸಾಕಷ್ಟು ಆಕ್ಷೇಪ, ವಿರೋಧಗಳು ಕೇಳಿಬರುತ್ತಿವೆ. ಹಲವರು ನಮ್ಮ ವೈರಿಯೊಂದಿಗೆ ಏಷ್ಯಾ ಕಪ್ ಟೂರ್ನಿಯ ಪಂದ್ಯವನ್ನಾಡುವುದು ಬೇಡ ಎಂದು ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದೆಡೆ, ಕ್ರಿಕೆಟ್ ಅಭಿಮಾನಿಗಳು ಇದೊಂದು ಪಂದ್ಯಕ್ಕೆ ತೀರ ಕುತೂಹಲ ವ್ಯಕ್ತಪಡಿಸಿದ್ದಾರೆ.
ಇದೇ ಸೆ.09ರಿಂದ ಆರಂಭಗೊಳ್ಳಲಿರುವ ಏಷ್ಯಾ ಕಪ್ ಹಿನ್ನೆಲೆ ತನ್ನ 17 ಸದಸ್ಯರ ತಂಡವನ್ನು ಪ್ರಕಟಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಮಾಜಿ ಕ್ಯಾಪ್ಟನ್ಗಳಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ರನ್ನು ತಂಡದಿಂದ ಕೈಬಿಟ್ಟಿದೆ. ಅಫ್ಘಾನಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹಾಗೂ ಏಷ್ಯಾ ಕಪ್ ಒಳಗೊಂಡ ಎರಡೂ ತ್ರಿಕೋನ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಈ ತಂಡವನ್ನು ಪ್ರಕಟಿಸಿದೆ.
ಬಾಬರ್ ಅಜಮ್ ಮತ್ತು ರಿಜ್ವಾನ್ ಬದಲಿಗೆ ತಂಡವನ್ನು ಸಲ್ಮಾನ್ ಅಲಿ ಆಘಾ ಮುನ್ನಡೆಸಲಿದ್ದಾರೆ. ಮೊಹಮ್ಮದ್ ಹ್ಯಾರಿಸ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಸ್ಟಾರ್ ವೇಗಿ ಶಾಹೀನ್ ಅಫ್ರಿದಿ ಮತ್ತು ಫಖರ್ ಜಮಾನ್ ಸ್ಥಾನ ಪಡೆದಿದ್ದಾರೆ. ಇದರ ಮಧ್ಯೆ ಅನುಭವಿ ಆಟಗಾರರು ಎಂದೇ ಗುರುತಿಸಿಕೊಂಡಿದ್ದ ಬಾಬರ್ ಮತ್ತು ರಿಜ್ವಾನ್‌ಗೆ ಇದೀಗ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ ಎಂಬುದು ಹಲವರ ಕುತೂಹಲವನ್ನು ಕೆರಳಿಸಿದೆ.
ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಟಿ20 ಟೂರ್ನಿ ಇದೇ ಸೆಪ್ಟೆಂಬರ್ 9ರಿಂದ 28 ರವರೆಗೆ ನಡೆಯಲಿದೆ. ಭಾರತ, ಯುಎಇ ಮತ್ತು ಒಮಾನ್ ಜೊತೆಗೆ ಪಾಕಿಸ್ತಾನವನ್ನು ಗ್ರೂಪ್ ಎನಲ್ಲಿ ಇರಿಸಲಾಗಿದೆ. ಸೆಪ್ಟೆಂಬರ್ 12ರಂದು ಓಮನ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿರುವ ಪಾಕ್, ಸೆಪ್ಟೆಂಬರ್ 14ರಂದು ಭಾರತದ ಜತೆ ಮುಖಾಮುಖಿಯಾಗಲಿದೆ.
ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲಾತ್, ಖುಶ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಸೀಮ್ ಜೂನಿಯರ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಅಫ್ರಿದಿ ಮತ್ತು ಸುಫ್ಯಾನ್ ಮೋಕಿಮ್.