ವಿಹಿಂಪದ ರಾಮಮಂದಿರದ ಮಾದರಿಯಲ್ಲಿ ಪರಿಷ್ಕರಣೆ ಸಾಧ್ಯತೆ: ಕಟ್ಟಡದ ಎತ್ತರ ಮತ್ತು ಮಹಡಿಗಳನ್ನು ಹೆಚ್ಚಿಸಲು ಚಿಂತನೆ

Ayodhay
Published on

ನವದೆಹಲಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರವನ್ನು ಇಂಥದ್ದೇ ವಿನ್ಯಾಸದಲ್ಲಿ ನಿರ್ಮಿಸಬೇಕು ಎಂದು ಮೂರು ದಶಕಗಳ ಹಿಂದೆಯೇ ಅದರ ಮಾದರಿ ತಯಾರಿಸಿತ್ತು ವಿಶ್ವ ಹಿಂದು ಪರಿಷದ್​(ವಿಹಿಂಪ). ಬದಲಾದ ಸನ್ನಿವೇಶ ಮತ್ತು ಪರಿಸ್ಥಿತಿಯಲ್ಲಿ ರಾಮ ಮಂದಿರದ ನಿರ್ಮಾಣದ ಹೊಣೆಗಾರಿಕೆಯನ್ನು ಸುಪ್ರೀಂ ಕೋರ್ಟ್ ನಿರ್ದೇಶನಾನುಸಾರ ಈಗ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್(ರಾಮ ಮಂದಿರ ಟ್ರಸ್ಟ್​) ಹೆಗಲೇರಿದೆ. ವಿಹಿಂಪದ ಮಾದರಿಯಲ್ಲಿ 125 ಅಡಿ ಎತ್ತರ ಇರುವುದನ್ನು ಹೆಚ್ಚುವರಿಯಾಗಿ ಮೂರನೇ ಮಹಡಿ ನಿರ್ಮಿಸಬೇಕಾದ್ದರಿಂದ 160 ಅಡಿಗೆ ಏರಿಸಲು ಚಿಂತನೆ ನಡೆದಿದೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ.

ರಾಮ ಮಂದಿರ ಟ್ರಸ್ಟ್​ನ ಜನರಲ್​ ಸೆಕ್ರಟರಿ ಚಂಪತ್ ರಾಯ್​, ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ, ಅನಿಲ್ ಮಿಶ್ರಾ ಮುಂತಾದವರು ಮಂದಿರ ನಿರ್ಮಾಣ ಕಮಿಟಿಯ ಮುಖ್ಯಸ್ಥರಾದ ನೃಪೇಂದ್ರ ಮಿಶ್ರಾ ಅವರನ್ನು ಗುರುವಾರ ಭೇಟಿಯಾಗಿದ್ದರು. ಅಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಅನೇಕ ವಿಚಾರಗಳು ಚರ್ಚೆಗೆ ಬಂದಿವೆ. ಮೂಲಗಳ ಪ್ರಕಾರ, ನೃಪೇಂದ್ರ ಮಿಶ್ರಾ ಅವರು ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಅನೇಕ ಗುಂಪುಗಳ ಜತೆಗೆ ವಿನ್ಯಾಸ ಮತ್ತು ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಆದರೆ ವಿಹಿಂಪ ಮಾತ್ರ ತನ್ನ ಹಳೆಯ ಮಾದರಿಯನ್ನೇ ಮಂದಿರದಲ್ಲಿ ಅಳವಡಿಸಬೇಕು ಎಂದು ಒತ್ತಡ ಹೇರುತ್ತಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಟ್ರಸ್ಟ್​ನ ಸದಸ್ಯ ಸ್ವಾಮಿ ಗೋವಿಂದ್ ದೇವ್ ಗಿರಿ, ಮಂದಿರವನ್ನು ವಿಹಿಂಪದ ಮ್ಯಾಪ್ ಪ್ರಕಾರವೇ ನಿರ್ಮಿಸಲಾಗುತ್ತಿದೆ. ಆದರೆ, ಕೆಲವೊಂದು ಪರಿಷ್ಕರಣೆಗಳೂ ಇರಲಿವೆ ಎಂದಿದ್ದಾರೆ.

ಟ್ರಸ್ಟ್​ನ ಮತ್ತೊಬ್ಬ ಸದಸ್ಯರ ಪ್ರಕಾರ, ಮಂದಿರಕ್ಕೆ ಸಂಬಂಧಿಸಿದ ನೀಲಿ ನಕ್ಷೆ ವಿಚಾರದಲ್ಲಿ ಅನೇಕ ಸಲಹೆಗಳು ಬಂದಿವೆ. ಹಳೆಯ ವಿನ್ಯಾಸವಾದ ಕಾರಣ ಎರಡು ಮಹಡಿಗಳ ಬದಲು ಮೂರು ಮಹಡಿ ಮಂದಿರ ನಿರ್ಮಾಣದ ಸಲಹೆಗಳಿವೆ. 35 ಅಡಿ ಎತ್ತರ ಶಿಖರವೂ ಬೇಕೆಂಬ ಬೇಡಿಕೆ ಇದೆ. ವಿಹಿಂಪ ಬಳಿ ಇರುವ ನೀಲಿ ನಕ್ಷೆಯನ್ನು ಕಲಾಕಾರ ಚಂದ್ರಕಾಂತ್ ಸೋಂಪುರ 1987ರಲ್ಲಿ ಅಂದಿನ ವಿಹಿಂಪ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರ ಅಪೇಕ್ಷೆಯಂತೆ ಸಿದ್ಧಪಡಿಸಿರುವಂಥದ್ದು. ಪ್ರಸ್ತಾವಿತ ರಾಮಮಂದಿರವನ್ನು ವಿಷ್ಣುವಿನ ಇಷ್ಟದ ಅಷ್ಟ ಭುಜಾಕೃತಿಯಲ್ಲಿ ನಿರ್ಮಿಸಲಾಗುತ್ತದೆ. ಸಂಪೂರ್ಣ ಕಲ್ಲಿನಿಂದಲೇ ಇದನ್ನು ನಿರ್ಮಿಸಲಾಗುತ್ತದೆ. ಇದಕ್ಕಾಗಿ 1.75 ಲಕ್ಷ ಕ್ಯುಬಿಕ್ ಫೀಟ್ ಕಲ್ಲಿನ ಅವಶ್ಯಕತೆ ಇದೆ. ಮಂದಿರ ನಿರ್ಮಾಣಕ್ಕೆ ಮೂರು ವರ್ಷ ಬೇಕಾಗಬಹುದು.

ವಿಹಿಂಪದ ಮ್ಯಾಪ್ ಪ್ರಕಾರ ಮಂದಿರ ಉದ್ದ 270 ಅಡಿ, ಅಗಲ 135 ಅಡಿ, ಎತ್ತರ 125 ಅಡಿ. ಪ್ರತಿ ಮಹಡಿಯಲ್ಲೂ 106 ಕಂಬಗಳು ಇರಲಿದ್ದು, 185 ಬೀಮ್​ಗಳನ್ನು ಹೊಂದಿರಲಿದೆ. ದ್ವಾರಗಳು ಮರದಿಂದ ನಿರ್ಮಿಸಲ್ಪಟ್ಟಿದ್ದು, ಅಮೃತ ಶಿಲೆಯ ಚೌಕಟ್ಟು ಹೊಂದಿರಲಿದೆ. ನೆಲಮಹಡಿಯಲ್ಲಿ ರಾಮ ವಿಗ್ರಹ, ಮೊದಲ ಮಹಡಿಯಲ್ಲಿ ರಾಮನ ದರ್ಬಾರ್​, ಅಲ್ಲಿಯೇ ಗರ್ಭ ಗುಡಿಯೂ ಇರಲಿದೆ. ದೇವಸ್ಥಾನಕ್ಕೆ ಐದು ಪ್ರವೇಶ ದ್ವಾರಗಳು ಇರಲಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net