ಹಿರಿಯ ಕಾಂಗ್ರೆಸ್ಸಿಗ ಮೋತಿಲಾಲ್ ವೋರಾ ವಿಧಿವಶ

Motilal vora
Published on

ನವದೆಹಲಿ: ನೆಹರೂ ಗಾಂಧಿ ಕುಟುಂಬಕ್ಕೆ ಬಹಳ ಆಪ್ತರಾಗಿದ್ದ ಹಿರಿಯ ಕಾಂಗ್ರೆಸ್ಸಿಗ ಮೋತಿಲಾಲ್ ವೋರಾ ಸೋಮವಾರ ವಿಧಿವಶರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಅವರು ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿದ್ದರು. ಭಾನುವಾರ ರಾತ್ರಿ ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಕೂಡಲೇ ಅವರನ್ನು ಎಸ್ಕಾರ್ಟ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರು. ರಾಹುಲ್ ಗಾಂಧಿ ಸೇರಿ ಅನೇಕರು ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಸಂತಾಪ ಸೂಚಿಸಿದ್ದಾರೆ.

ಮೋತಿಲಾಲ್ ವೋರಾ ಅವರು ನಿನ್ನೆಯಷ್ಟೇ 93ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. 1927ರ ಡಿಸೆಂಬರ್ 20 ರಂದು ಬ್ರಿಟಿಷ್ ಇಂಡಿಯಾದ ಜೋಧಪುರ ರಾಜ್ಯದ ನಿಂಬಿ ಜೋಧಾ ಎಂಬಲ್ಲಿ ಪುಷ್ಕರಣ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಮೋಹನ್​ಲಾಲ್ ವೋರಾ, ತಾಯಿ ಅಂಬಾ ಬಾಯಿ. ರಾಯ್​ಪುರ ಮತ್ತು ಕೋಲ್ಕತದಲ್ಲಿ ಶಿಕ್ಷಣ ಪಡೆದ ಅವರು, ಅನೇಕ ವರ್ಷಗಳ ಕಾಲ ಪತ್ರಕರ್ತರಾಗಿ ಕೆಲಸ ಮಾಡಿದ್ದರು. ಅವರ ಪತ್ನಿ ಶಾಂತಿ ದೇವಿ ವೋರಾ. ಇಬ್ಬರು ಪುತ್ರರು ಮತ್ತು ನಾಲ್ವರು ಪುತ್ರಿಯರು. ಪುತ್ರ ಅರುಣ್ ವೋರಾ ಈಗ ಮೂರನೇ ಬಾರಿ ಶಾಸಕರಾಗಿದ್ದಾರೆ.

ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಅವರನ್ನು ನಾಮನಿರ್ದೇಶನ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದರು. 1988ರ ಫೆಬ್ರವರಿ 14ರಂದು ರಾಜ್ಯಸಭಾ ಸದಸ್ಯರಾದ ಅವರು ಅಂದು ಕೇಂದ್ರ ಆರೋಗ್ಯ ಸಚಿವರಾಗಿದ್ದರು. ಬಳಿಕ ನಾಗರಿಕ ವಿಮಾನಯಾನ ಖಾತೆ ಹೊಣೆಗಾರಿಕೆ ನಿಭಾಯಿಸಿದ್ದರು. 1993ರ ಮೇ 16ರಂದು ಅವರನ್ನು ಉತ್ತರ ಪ್ರದೇಶದ ರಾಜ್ಯಪಾಲರನ್ನಾಗಿ ನಿಯೋಜಿಸಲಾಗಿತ್ತು. 1996ರ ಮೇ 3 ರ ತನಕ ಅವರು ಅಲ್ಲಿ ರಾಜ್ಯಪಾಲರಾಗಿದ್ದರು. 1998-99ರಲ್ಲಿ 12ನೇ ಲೋಕಸಭೆಯ ಸದಸ್ಯರಾಗಿದ್ದರು.

ಅಸೋಸಿಯೇಡೆಟ್ ಜರ್ನಲ್ಸ್ ಲಿಮಿಟೆಡ್​ನ ನ್ಯಾಷನಲ್ ಹೆರಾಲ್ಡ್, ಯಂಗ್ ಇಂಡಿಯನ್ ಮತ್ತು ಆಲ್​ ಇಂಡಿಯಾ ಕಾಂಗ್ರೆಸ್​ ಕಮಿಟಿಯಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್​ನ ಚೇರ್​ಮನ್ ಮತ್ತು ಎಂಡಿ ಆಗಿ 2002ರಲ್ಲಿ ನೇಮಕವಾಗಿದ್ದರು. ಎಐಸಿಸಿ ಖಜಾಂಜಿಯಾಗಿದ್ದರು. ಯಂಗ್​ ಇಂಡಿಯನ್​ನಲ್ಲಿ ಶೇಕಡ 12 ಪಾಲುದಾರಿಕೆ ಹೊಂದಿದ್ದರು.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net