Bully Bhouvan Ponnanna - ಬುಲ್ಲಿಯಲ್ಲಿ ಭುವನ್​ಗೆ ನಾಯಕಿಯಾದ ನಟಿ ಊರ್ವಶಿ ಪುತ್ರಿ ತೇಜಲಕ್ಷ್ಮೀ

Bhouvan Ponnanna, Urvashi and Tejalakshmi
Bhouvan Ponnanna, Urvashi and Tejalakshmi
Published on
Bully Bhouvan Ponnanna -
"ರಾಂಧವ' ಸಿನಿಮಾ, "ಬಿಗ್​ಬಾಸ್​ ಕನ್ನಡ ಸೀಸನ್​ 4' ಖ್ಯಾತಿಯ ನಟ ಭುವನ್​ ಪೊನ್ನಣ್ಣ "ಬುಲ್ಲಿ' ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತಿದೆ. "ಕಥಾ ವಿಚಿತ್ರ', "ಮೆಹಬೂಬ', "ಕುಟೀರ' ನಿರ್ದೇಶಕ ಅನೂಪ್​ ಆ್ಯಂಟನಿ ಈ ಡಾರ್ಕ್​ ಕಾಮಿಡಿ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದು, ಇತ್ತೀಚೆಗಷ್ಟೆ 17 ದಿನಗಳ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಬುಲ್ಲಿ ಚಿತ್ರದ ಮೂಲಕ ಹಿರಿಯ ನಟಿ ಊರ್ವಶಿ ಕನ್ನಡಕ್ಕೆ ಕಮ್​ಬ್ಯಾಕ್​ ಮಾಡಿದ್ದು, ನಾಯಕನ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಅವರ ಪುತ್ರಿ ತೇಜಲಕ್ಷ್ಮೀ ಜಯನ್​ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಆ ಮೂಲಕ ಇದೇ ಮೊದಲ ಬಾರಿಗೆ ಅಮ್ಮ - ಮಗಳು ಒಂದೇ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಸದ್ಯಕ್ಕೆ ಘೋಷಣೆಯಷ್ಟೇ ಮಾಡಲಾಗಿದ್ದು, ಅವರ ಪಾತ್ರವನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಹಾಗೇ "ರಾಮ ಶಾಮ ಭಾಮ' (2005) ಬಳಿಕ 21 ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಮರಳಿರುವ ನಟಿ ಊರ್ವಶಿ, "ಈ ಸಿನಿಮಾ ಮೂಲಕ ನನ್ನ ಮಗಳು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದು ಖುಷಿ ನೀಡಿದೆ. ಜತೆಗೆ ತೇಜಲಕ್ಷಿ$್ಮ ಈಗಾಗಲೇ ಕೆಲ ಚಿತ್ರಗಳಲ್ಲಿ ನಟಿಸಿದ್ದಾಳೆ. ಆದರೆ, ನಾನು, ಅವಳು ಒಟ್ಟಿಗೆ ತೆರೆ ಹಂಚಿಕೊಂಡಿಲ್ಲ. ಈ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸುತ್ತಿರುವುದು ಖುಷಿ ಹೆಚ್ಚಿಸಿದೆ' ಎಂದು ಸಂತಸ ಹಂಚಿಕೊಂಡರು. ನಾಯಕ ಭುವನ್​ ಪೊನ್ನಣ್ಣ, "730ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಪಂಚಭಾಷಾ ನಟಿ ಊರ್ವಶಿ ಅವರ ಜತೆ ನಟಿಸುವುದು ನನ್ನ ಬಹು ದಿನಗಳ ಆಸೆ. ಅದನ್ನು ಕೆಲ ವರ್ಷಗಳ ಹಿಂದೆ ಹರ್ಷಿಕಾ ಬಳಿಯೂ ಹೇಳಿಕೊಂಡಿದ್ದೆ. ಆ ಆಸೆ ಇದೀಗ "ಬುಲ್ಲಿ' ಮೂಲಕ ಈಡೇರಿರುವುದು ಖುಷಿ ನೀಡಿದೆ. ಅವರಿಂದ ತುಂಬ ಕಲಿತಿದ್ದೇನೆ. ಯಾವುದೇ ಸಂದೇಶ ನೀಡದೇ, ಮನರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡು ಮಾಡಿರುವ ಚಿತ್ರವಿದು' ಎಂದು ಹೇಳಿಕೊಳ್ಳುತ್ತಾರೆ. ಭುವನ್​, ತೇಜಲಕ್ಷ್ಮೀ, ಊರ್ವಶಿ ಜತೆ ಓಂಪ್ರಕಾಶ್​ ರಾವ್​, ಅಚ್ಯುತ್​ ಕುಮಾರ್​, ಪ್ರಕಾಶ್​ ತೂಮಿನಾಡ್​, ಹುಲಿ ಕಾರ್ತಿಕ್​, ಮಾ. ಆರ್ಯ ಪ್ರಮುಖ ತಾರಾಗಣದಲ್ಲಿದ್ದಾರೆ.

ಕೋಟ್​:

"ಬುಲ್ಲಿ'ಯಲ್ಲಿ ನಾನು ಮಧ್ಯಮ ಕುಟುಂಬದ ಜೆನ್​&ಜಿ ಹುಡುಗ. ಪಾತ್ರದ ಹೆಸರು ಬಲರಾಮ. ಆತನನ್ನು ಎಲ್ಲರೂ "ಬುಲ್ಲಿ' ಎಂದು ಕರೆಯುತ್ತಿರುತ್ತಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ, ಯಾವುದೇ ಗುರಿಯಿಲ್ಲದೇ ತನ್ನಷ್ಟಕ್ಕೆ ತಾನಿರುವ ಹುಡುಗ. ಇದು ಇವತ್ತಿನ ಪೀಳಿಗೆಯ ಎಲ್ಲರಿಗೂ ಕನೆಕ್ಟ್​ ಆಗುವ, ಎಲ್ಲರನ್ನೂ ನಗಿಸುವ ಚಿತ್ರವಾಗಲಿದೆ.
- ಭುವನ್​ ಪೊನ್ನಣ್ಣ, ನಾಯಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net