ಹಾಪ್​ಕಾಮ್ಸ್​ಗೆ ವರದಾನವಾಯ್ತು ಸೆಮಿ ಲಾಕ್​ಡೌನ್: ದಿನಕ್ಕೆ 50 ಟನ್ ಹಣ್ಣು, ತರಕಾರಿ ವಹಿವಾಟು; ಮಾಲ್​ಗಳು ಬಂದ್ ಆಗಿರುವುದೂ ಕಾರಣ

Hopcoms
Published on

| ಅವಿನಾಶ ಮೂಡಂಬಿಕಾನ ಬೆಂಗಳೂರು

ಲಾಕ್​ಡೌನ್​ನಿಂದಾಗಿ ಬಹುತೇಕ ಚಟುವಟಿಕೆಗಳು ನೆಲಕಚ್ಚಿವೆ. ಆದರೆ, ರೈತರಿಂದ ನೇರವಾಗಿ ಖರೀದಿಸಿ ಜನರಿಗೆ ಹಣ್ಣು, ತರಕಾರಿ ಮಾರಾಟ ಮಾಡುತ್ತಿರುವ ಹಾಪ್​ಕಾಮ್ಸ್​ಗಳಲ್ಲಿ ಮಾತ್ರ ವ್ಯಾಪಾರ ಭರಾಟೆ ಜೋರಾಗಿದೆ. ಬೆಂಗಳೂರಿನಲ್ಲಿ ಒಟ್ಟು 175 ಹಾಪ್​ಕಾಮ್ಸ್​ಗಳಿವೆ. ಕರೊನಾ 2ನೇ ಅಲೆ ಆರಂಭಕ್ಕೂ ಮೊದಲು ಈ ಮಳಿಗೆಗಳಲ್ಲಿ 35ರಿಂದ 40 ಟನ್ ತರಕಾರಿ, ಹಣ್ಣುಗಳ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಇದೀಗ ಪ್ರತಿನಿತ್ಯ 50 ಟನ್ ವಹಿವಾಟು ನಡೆಯುತ್ತಿದ್ದು, ಸೋಮವಾರ 80ರಿಂದ 100 ಟನ್ ವ್ಯಾಪಾರ ನಡೆಯುತ್ತದೆ ಎನ್ನುತ್ತಾರೆ ಬೆಂಗಳೂರು ಹಾಪ್​ಕಾಮ್ಸ್​ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ.

ಪೈಪೋಟಿ ಇಲ್ಲ: ಈ ಹಿಂದೆ ಗ್ರಾಹಕರು ವಾರಾಂತ್ಯದಲ್ಲಿ ಹೆಚ್ಚಾಗಿ ಮನೆ ಸಮೀಪದ ತರಕಾರಿ ಅಂಗಡಿ, ಮಾಲ್​ಗಳ ಮೊರೆ ಹೋಗುತ್ತಿದ್ದರು. ಉಳಿದ ದಿನಗಳಲ್ಲಿ ಇತರ ಸಣ್ಣಪುಟ್ಟ ಅಂಗಡಿಗಳು, ಮಾಲ್​ಗಳಲ್ಲೂ ಹಣ್ಣು, ತರಕಾರಿ ಮಾರಾಟ ಇರುತ್ತಿತ್ತು. ಲಾಕ್​ಡೌನ್ ಜಾರಿ ಬಳಿಕ ಮಾಲ್​ಗಳು ಬಂದ್ ಆಗಿವೆ. ಇತರ ತರಕಾರಿ, ಹಣ್ಣುಗಳ ಅಂಗಡಿಗಳಿಗೆ ಬೆಳಗ್ಗೆ 10 ಗಂಟೆವರೆಗೆ ಮಾತ್ರ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಹಾಪ್​ಕಾಮ್ಸ್​ಗಳಿಗೆ ಸಂಜೆ 6ರವರೆಗೂ ತೆರೆದಿರಲು ಅನುಮತಿ ನೀಡಲಾಗಿದೆ. ಈ ಹಿಂದೆ ಮಾಲ್, ಇತರ ಅಂಗಡಿಗಳಿಂದ ಹಾಪ್​ಕಾಮ್್ಸ ವ್ಯಾಪಾರಕ್ಕೆ ಹೊಡೆತ ಬೀಳುತ್ತಿತ್ತು. ಇದೀಗ ಹಾಪ್​ಕಾಮ್ಸ್​ಗೆ ಸ್ಪರ್ಧೆ ನೀಡುವವರೇ ಇಲ್ಲದಂತಾಗಿದೆ.

ಆಕರ್ಷಿತರಾಗಿರುವ ಗ್ರಾಹಕರು: 2020ರ ಲಾಕ್​ಡೌನ್ ಸಂದರ್ಭದಲ್ಲಿ ಖರೀದಿಸಿದ ಪದಾರ್ಥಗಳಲ್ಲಿ 10-15 ಟನ್ ಉಳಿಯುತ್ತಿತ್ತು. ಆದರೆ, ಈ ಬಾರಿ ಜನ ಹಾಪ್​ಕಾಮ್್ಸ ಪದಾರ್ಥಗಳತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ರೈತರಿಂದ ನೇರವಾಗಿ ಖರೀದಿಸಿ ಮಾರಾಟ ಮಾಡುವ ಹಿನ್ನೆಲೆಯಲ್ಲಿ ಗ್ರಾಹಕರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ಕರೊನಾ ಭೀತಿಯಿಂದ ಹೋಟೆಲ್, ಕಾರ್ಖಾನೆ, ಕಚೇರಿ, ಖಾಸಗಿ ಕಂಪನಿ, ಹಾಸ್ಟೆಲ್​ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇಲ್ಲೂ ವಹಿವಾಟು ನಡೆದಿದ್ದರೆ ವ್ಯಾಪಾರ ಇನ್ನಷ್ಟು ಹೆಚ್ಚುತ್ತಿತ್ತು ಎಂದು ಉಮೇಶ್ ಮಿರ್ಜಿ ಅಭಿಪ್ರಾಯಪಡುತ್ತಾರೆ.

ಹೂವಿನ ವ್ಯಾಪಾರಕ್ಕೆ ಪೆಟ್ಟು: ಲಾಕ್​ಡೌನ್ ಜಾರಿ ಮಾಡಿರುವುದರಿಂದ ಗುಲಾಬಿ ಹೂವಿನ ವ್ಯಾಪಾರ ನಷ್ಟದಲ್ಲಿದೆ. ಬೆಂಗಳೂರಿನ ಅಂತಾರಾಷ್ಟ್ರೀಯ ಹೂವು ಹರಾಜು ಕೇಂದ್ರದಲ್ಲಿ (ಐಫ್ಯಾಬ್) ಪ್ರತಿದಿನ ಮಾರಾಟವಾಗುತ್ತಿದ್ದ 3.5 ಲಕ್ಷ ಗುಲಾಬಿ ಪ್ರಮಾಣ 50 ಸಾವಿರಕ್ಕೆ ಕುಸಿದಿದೆ. ಪ್ರತಿನಿತ್ಯ 1 ಲಕ್ಷಕ್ಕೂ ಹೆಚ್ಚು ಹೂವು ಯೂರೋಪ್, ಆಸ್ಟ್ರೇಲಿಯಾ ಮತ್ತು ಅರಬ್ ದೇಶಗಳಿಗೆ ರಫ್ತಾಗುತ್ತಿದ್ದವು. ಇದೀಗ ಬೇರೆ ದೇಶಗಳಲ್ಲೂ ಕರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿದೆ. ನಿಶ್ಚಿತಾರ್ಥ, ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಕಡಿವಾಣ ಹಾಕಿರುವ ಕಾರಣ ಹೂವುಗಳ ಮಾರಾಟ ಕಡಿಮೆಯಾಗಿದೆ. ಶೇ.40 ಮಾತ್ರ ವ್ಯಾಪಾರವಾಗುತ್ತಿದೆ. ರೈತರು ಲಕ್ಷಾಂತರ ರೂ. ಖರ್ಚು ಮಾಡಿ ಪಾಲಿಹೌಸ್ ನಿರ್ವಿುಸಿ ಬೆಳೆದ ಹೂವುಗಳು ಮಾರಾಟವಾಗುತ್ತಿಲ್ಲ. ಪಾಲಿಹೌಸ್​ಗೆ ಮಾಡಿದ ಸಾಲ ಮರು ಪಾವತಿಸಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆಲ ಋತುಮಾನಗಳಲ್ಲಿ ಅಷ್ಟೊಂದು ವ್ಯಾಪಾರ ಆಗುವುದಿಲ್ಲ. ಡಿಸೆಂಬರ್ ನಂತರ 6 ತಿಂಗಳುಗಳ ಕಾಲ ಸಾಮಾನ್ಯವಾಗಿ ಕೆಲ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಲಾಕ್​ಡೌನ್ ನಡುವೆಯೂ ಗ್ರಾಹಕರು ಹಾಪ್​ಕಾಮ್ಸ್​ನಲ್ಲಿ ಪದಾರ್ಥ ಖರೀದಿಗೆ ಆಸಕ್ತಿ ತೋರಿಸುತ್ತಿರುವುದರಿಂದ ನಷ್ಟವಾಗಿಲ್ಲ.

| ಉಮೇಶ್ ಮಿರ್ಜಿ ಹಾಪ್​ಕಾಮ್ಸ್​ (ಬೆಂಗಳೂರು) ವ್ಯವಸ್ಥಾಪಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net