ನಾಮಪತ್ರ ಪರಿಶೀಲನೆ; 60 ತಿರಸ್ಕೃತ, 276 ಅಭ್ಯರ್ಥಿಗಳ ನಾಮಪತ್ರ ಸಿಂಧು

ECI
Published on

ಬೆಂಗಳೂರು: ಲೋಕಸಭೆ ಚುನಾವಣೆಯ ನಾಮಪತ್ರ ಪರಿಶೀಲನೆ ಪೂರ್ಣಗೊಂಡಿದ್ದು, ಇನ್ನೇನಿದ್ದರೂ ಕಣದಿಂದ ಹಿಂದೆ ಸರಿಸುವ ಕಸರತ್ತು ನಡೆಯುತ್ತಿದೆ.

ಜಾತಿ, ಅಧಿಕಾರಿ, ಹಣ ಮತ್ತಿತರ ಆಮಿಷ ಒಡ್ಡಿ ಅಭ್ಯರ್ಥಿಗಳನ್ನು ಉಮೇದುವಾರಿಕೆಯಿಂದ ಹಿಂದಕ್ಕೆ ಸರಿಸುವುದರ ಕಡೆಗೆ ರಾಜಕೀಯ ಪಕ್ಷಗಳು ಪ್ರಯತ್ನ ನಡೆಸಿವೆ.

ಅನೇಕ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಅಡ್ಡಗಾಲಾಗುವ ಅಭ್ಯರ್ಥಿಗಳನ್ನು ಗುರುತಿಸಿ ಅವರ ಮನವೊಲಿಸುವ ಪ್ರಕ್ರಿಯೆ ಆರಂಭವಾಗಿದೆ. ತಮ್ಮ ತಮ್ಮ ಪಕ್ಷದ ಹೈಕಮಾಂಡ್ ಮೂಲಕ ಗೆಲುವಿಗೆ ಕಂಠಕಪ್ರಾಯರಾಗುವವರನ್ನು ಗುರುತಿಸಿ ವಾಪಸ್ ತೆಗೆಸುವ ಕೆಲಸ ನಡೆಯಲಿದೆ.

ಒಂದೇ ಹೆಸರಿನ ಇಬ್ಬರು, ಮೂವರು, ನಾಲ್ಕು ಜನ ಕಣದಲ್ಲಿರುವುದೂ ಕೂಡ ಕೆಲವು ಅಭ್ಯರ್ಥಿಗಳಿಗೆ ಮಗ್ಗಲು ಮುಳ್ಳಾಗಿದೆ. ತಮಗೆ ಬರಬೇಕಾದ ಮತಗಳು ಇನ್ನಾರ ಪಾಲಾಗುವ ಆತಂಕದಲ್ಲಿ ಅಂತಹವರನ್ನು ಕಣದಿಂದ ಹಿಂದೆ ಸರಿಸುವ ಪ್ರಯತ್ನಗಳೂ ನಡೆಯುತ್ತಿವೆ.

ಕೆಲವು ಕಡೆ ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಅವರನ್ನು ಆಯಾ ಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ. ಕೆಲವು ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳು ಕೂಡ ಬಂಡಾಯ/ಸ್ವತಂತ್ರ್ಯ ಅಭ್ಯರ್ಥಿಗಳ ಸ್ಪರ್ಧೆಯಿಂದ ಆತಂಕಿತರಾಗಿದ್ದಾರೆ.

276 ಅಭ್ಯರ್ಥಿಗಳ ನಾಮಪತ್ರ ಊರ್ಜಿತ

ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಪರಿಶೀಲನೆ ಬಳಿಕ 276 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಏ.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಒಟ್ಟು 333 ಪುರುಷ, 25 ಮಹಿಳೆಯರು ಸೇರಿದಂತೆ ಒಟ್ಟು 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದರು. 384 ನಾಮಪತ್ರ ಸ್ವೀಕೃತಗೊಂಡಿದ್ದು, ನಾಮಪತ್ರ ಪರಿಶೀಲನೆ ಬಳಿಕ 60 ನಾಮಪತ್ರಗಳು ತಿರಸ್ಕೃತಗೊಂಡಿವೆ.

ಅಂತಿಮವಾಗಿ 276 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಯಾವ ಕ್ಷೇತ್ರ? ಎಷ್ಟು ಅಭ್ಯರ್ಥಿಗಳು

ಉಡುಪಿ-ಚಿಕ್ಕಮಗಳೂರು 10, ಹಾಸನ 18, ದಕ್ಷಿಣ ಕನ್ನಡ 10, ಚಿತ್ರದುರ್ಗ 24, ತುಮಕೂರು 22, ಮಂಡ್ಯ 19, ಮೈಸೂರು 24, ಚಾಮರಾಜನಗರ 22, ಬೆಂಗಳೂರು ಗ್ರಾಮಾಂತರ 27, ಬೆಂಗಳೂರು ಉತ್ತರ 21, ಬೆಂಗಳೂರು ಕೇಂದ್ರ 28, ಬೆಂಗಳೂರು ದಕ್ಷಿಣ (ಮುಂದೂಡಲಾಗಿದೆ),ಚಿಕ್ಕಬಳ್ಳಾಪುರ 32, ಕೋಲಾರ 19 ಸೇರಿದಂತೆ 276 ಮಂದಿ ಅಭ್ಯರ್ಥಿಗಳ ನಾಮಪತ್ರಗಳು ಸಿಂಧುಗೊಂಡಿವೆ. ನಾಮಪತ್ರ ವಾಪಸ್ ಪಡೆಯಲು ಏ.8 ಕೊನೆಯ ದಿನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net