

ಹೈದರಾಬಾದ್: ಇತ್ತೀಚೆಗಷ್ಟೇ ತೆಲುಗು ನಟ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಎಂಗೇಜ್ಮೆಂಟ್ ಬಹಳ ಸರಳವಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನೆರವೇರಿತು. ಇದು ನಟನ ಎರಡನೇ ವಿವಾಹವಾಗಲಿದ್ದು, ಈ ಹಿಂದೆ ನಟಿ ಸಮಂತಾ ಅವರಿಗೆ ವಿಚ್ಛೇದನ ಕೊಡುವ ಮೂಲಕ ತಮ್ಮ ಮೊದಲನೇ ಮದುವೆಗೆ ಗುಡ್ಬೈ ಹೇಳಿದರು. ಸದ್ಯ ಶೋಭಿತಾ ಜತೆ ಚೈ ಖುಷಿ ಕ್ಷಣಗಳನ್ನು ಕಳೆಯುತ್ತಿರುವ ವೇಳೆಗೆ ಸ್ಫೋಟಕ ಭವಿಷ್ಯ ನುಡಿದ ಜೋತಿಷಿ ವೇಣು ಸ್ವಾಮಿ, ನಿಮ್ಮಿಬ್ಬರ ಸಂಬಂಧವು ಒಂದು ಹೆಣ್ಣಿನ ವಿಷಯಕ್ಕಾಗಿಯೇ 2027ರಲ್ಲಿ ಮುರಿದುಬೀಳಲಿದೆ ಎಂದು ವಿಡಿಯೋ ಮೂಲಕ ತಿಳಿಸಿದರು. ಇದೀಗ ಈ ವಿಷಯ ಟಾಲಿವುಡ್ನಲ್ಲಿ ದೊಡ್ಡ ವಿವಾದಕ್ಕೆ ತಿರುಗಿದೆ.
ವಿವಾದಗಳಿಗೆಂದೇ ಹೆಸರುವಾಸಿಯಾಗಿರುವ ಜೋತಿಷಿ ವೇಣು ಸ್ವಾಮಿ, ತೆಲುಗು ಚಿತ್ರರಂಗದ ಸ್ಟಾರ್ ನಟ-ನಟಿಯರ ಭವಿಷ್ಯ ಹೇಳುವ ಮುಖೇನ ಆಗಾಗ್ಗೆ ತೀವ್ರ ಟೀಕೆ, ಲೇವಡಿಯಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಪ್ರತಿಬಾರಿ ಅವರಿವರ ಭವಿಷ್ಯ ನುಡಿಯುತ್ತಿದ್ದ ವೇಣುಗೆ ಅದ್ಯಾಕೋ ಇದೀಗ ತನ್ನ ಸಮಯವೇ ಸರಿಯಿಲ್ಲ ಎಂಬುದು ಗೋಚರವಾದಂತಿದೆ. ಇದಕ್ಕೆ ಕಾರಣ, ನಾಗಚೈತನ್ಯ ಮತ್ತು ಶೋಭಿತಾ ಜೋಡಿ ಕುರಿತು ನುಡಿದ ಸ್ಫೋಟಕ ಭವಿಷ್ಯ. ವೇಣು ಹೇಳಿಕೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಂತೆ ಎಚ್ಚೆತ್ತುಕೊಂಡ ತೆಲುಗು ಚಲನಚಿತ್ರ ಪತ್ರಕರ್ತರ ಸಂಘ ಸ್ವಾಮಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಕೇವಲ ಚಲನಚಿತ್ರ ಪತ್ರಕರ್ತರ ಸಂಘದಿಂದ ಮಾತ್ರ ದೂರು ಪಡೆಯದ ವೇಣು, ಈ ರೀತಿಯ ಹೇಳಿಕೆಗಾಗಿ ತೆಲಂಗಾಣ ರಾಜ್ಯ ಮಹಿಳಾ ಆಯೋಗದಿಂದ ಸಮನ್ಸ್ ಸ್ವೀಕರಿಸಿದ್ದಾರೆ. ಸದ್ಯ ಭಾರೀ ವಿವಾದ ಹಾಗೂ ಟೀಕೆಗಳಿಂದ ತಮ್ಮ ಗುರುತನ್ನು ತಾತ್ಕಾಲಿಕವಾಗಿ ಮರೆ ಮಾಡಿಕೊಂಡಿರುವ ವೇಣು ಒಂದೆಡೆಯಾದರೆ, ಇದ್ಯಾವುದು ತನಗೆ ಗೊತ್ತಿಲ್ಲ ಎಂಬಂತೆ ನಾಗಚೈತನ್ಯರಿಂದ ಗಿಫ್ಟ್ ಕೇಳಿರುವ ವೇಣು ಸ್ವಾಮಿ ಪತ್ನಿ ವೀಣಾ ಶ್ರೀವಾಣಿ ಅವರ ನಡೆ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿರುವುದು ಮತ್ತೊಂದೆಡೆ.
ಥೇಟ್ ವೇಣು ಸ್ವಾಮಿಯಂತೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಒಂದಷ್ಟು ವಿಷಯ ಮಾತನಾಡಿರುವ ವೀಣಾ, "ನಾಗಚೈತನ್ಯ ಹಾಗೂ ಶೋಭಿತಾ ನಿಮ್ಮಿಬ್ಬರ ಜೋಡಿಗೆ ಒಳ್ಳೆಯದಾಗಲಿ. ಈಗಷ್ಟೇ ಎಂಗೇಜ್ಮೆಂಟ್ ಆಗಿರುವ ನಿಮಗೆ ಭಗವಂತ ಆರ್ಶಿವದಿಸಲಿ. ಕೆಲವರು ನೀವಿಬ್ಬರು ಎಂಗೇಜ್ಮೆಂಟ್ ಮಾಡಿಕೊಂಡ ವಿಷಯವನ್ನು ಬೇರೆಡೆಗೆ ತಿರುಗಿಸಿ, ಸುಖಾಸುಮ್ಮನೆ ಅನ್ಯರನ್ನು ಟಾರ್ಗೆಟ್ ಮಾಡ್ತಿದ್ದಾರೆ. ಆದ್ರೆ, ನಿಮ್ಮ ಜೋಡಿಯಿಂದ ನನಗೆ ಉಡುಗೊರೆ ಬರಬೇಕು, ಅದು ಎಲ್ವಿ ಅವರ ಇತ್ತೀಚಿನ ಬ್ಯಾಗ್" ಎಂದು ಕೇಳಿದ್ದಾರೆ. ನೋಡುಗರಿಗೆ ಇದು ನಗು ತರಿಸಿದರೂ ಹೀಗ್ಯಾಕೆ ವೀಣಾ ವರ್ತಿಸಿದ್ದಾರೆ ಎಂಬುದು ಅರ್ಥವಾಗಿಲ್ಲ.
ಅತ್ತ ಪತಿ ನೋಡಿದ್ರೆ ಚೈ ಹಾಗೂ ಶೋಭಿತಾ ಜೋಡಿ ಬಗ್ಗೆ ಸ್ಫೋಟಕ ಭವಿಷ್ಯ ನುಡಿದು ಸದ್ಯ ಭಾರೀ ವಿವಾದಕ್ಕೆ ಸಿಲುಕಿದ್ದಾರೆ. ಆದ್ರೆ, ಇತ್ತ ವೇಣು ಪತ್ನಿ ವೀಣಾ ಇದ್ಯಾವುದು ತನಗೆ ಗೊತ್ತೇ ಇಲ್ಲ ಎನ್ನುವಂತೆ ಬಿಂಬಿಸಿದ್ದು, ಪತಿಯ ಹೇಳಿಕೆಯನ್ನು ಮುನ್ನೆಲೆಗೆ ತರದೆ, ಅದೇ ಜೋಡಿಯಿಂದ ಉಡುಗೊರೆ ಬೇಕು ಎಂದು ಬಾಯ್ಬಿಟ್ಟು ಕೇಳಿರುವುದು ಇದೀಗ ಹಲವರ ಟೀಕೆಗೆ ಗುರಿಯಾಗಿದೆ,(ಏಜೆನ್ಸೀಸ್).