

ಹೈದರಾಬಾದ್: ಆಗಸ್ಟ್ ತಿಂಗಳಲ್ಲಿ ತೆಲುಗು ನಟ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಎಂಗೇಜ್ಮೆಂಟ್ ಬಹಳ ಸರಳವಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನೆರವೇರಿತು. ಇದು ನಟನ ಎರಡನೇ ವಿವಾಹವಾಗಿದ್ದು, ಈ ಹಿಂದೆ ನಟಿ ಸಮಂತಾ ಅವರಿಗೆ ವಿಚ್ಛೇದನ ಕೊಡುವ ಮೂಲಕ ತಮ್ಮ ಮೊದಲನೇ ಮದುವೆಗೆ ಗುಡ್ಬೈ ಹೇಳಿದರು. ಶೋಭಿತಾ ಜತೆ ಖುಷಿ ಕ್ಷಣಗಳನ್ನು ಕಳೆಯುತ್ತಿದ್ದ 'ಚೈ' ಹೊಸ ದಾಂಪತ್ಯ ಜೀವನ ಆರಂಭಕ್ಕೂ ಮುನ್ನವೇ ಸ್ಫೋಟಕ ಭವಿಷ್ಯ ನುಡಿದ ಜೋತಿಷಿ ವೇಣು ಸ್ವಾಮಿ (Venu Swamy), ನಿಮ್ಮಿಬ್ಬರ ಸಂಬಂಧವು ಒಂದು ಹೆಣ್ಣಿನ ವಿಷಯಕ್ಕಾಗಿಯೇ 2027ರಲ್ಲಿ ಮುರಿದುಬೀಳಲಿದೆ ಎಂದು ವಿಡಿಯೋ ಮೂಲಕ ತಿಳಿಸಿದ್ದರು. ಈ ವಿಷಯ ಟಾಲಿವುಡ್ನಲ್ಲಿ ದೊಡ್ಡ ವಿವಾದಕ್ಕೆ ತಿರುಗಿ, ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು ಅನೇಕರಿಗೆ ಗೊತ್ತೇ ಇದೆ.
ತನ್ನ ವಿವಾದಾತ್ಮಕ ಹೇಳಿಕೆ, ಭವಿಷ್ಯವಾಣಿಗಳಿಂದಲೇ ಟಾಲಿವುಡ್ ಅಂಗಳದಲ್ಲಿ ಆಗಾಗ್ಗೆ ಸದ್ದು ಮಾಡುವ ಜೋತಿಷಿ ವೇಣು ಸ್ವಾಮಿ, ನಾಗಚೈತನ್ಯ ಮತ್ತು ಶೋಭಿತಾ ಮದುವೆ ಸಂಬಂಧದ ಬಗ್ಗೆ ಭವಿಷ್ಯ ನುಡಿಯುವ ಮೊದಲು ಹೇಳಿದ್ದ ಹಲವಾರು ಕಾಂಟ್ರೋವರ್ಸಿ ಭವಿಷ್ಯಗಳು ಅಷ್ಟಾಗಿ ಗಂಭೀರ ಸ್ವರೂಪ ಪಡೆದುಕೊಂಡಿರಲಿಲ್ಲ. ಆದರೆ, ನವ ಜೋಡಿಗಳ ಹೊಸ ಬಾಳು ಶುರುವಾಗುವ ಮುನ್ನವೇ ಅವರಿಬ್ಬರ ಸಂಬಂಧ ಒಂದು ಹೆಣ್ಣಿನ ಮಧ್ಯಪ್ರವೇಶದಿಂದ 2027ರಲ್ಲಿ ಮುರಿದುಬೀಳಲಿದೆ ಎಂದು ಶಾಕಿಂಗ್ ಮುನ್ಸೂಚನೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ಮುನ್ನೆಲೆಗೆ ಬಂದಿತು. ವೇಣು ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಂತೆ ಎಚ್ಚೆತ್ತುಕೊಂಡ ತೆಲುಗು ಚಲನಚಿತ್ರ ಪತ್ರಕರ್ತರ ಸಂಘ, ಸ್ವಾಮಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಇದೀಗ ಕೋರ್ಟ್ನಲ್ಲಿ ನಡೆಯುತ್ತಿದೆ.
ವೇಣು ಸ್ವಾಮಿ ನುಡಿದ ಭವಿಷ್ಯದ ಬಗ್ಗೆ ಸಿಡಿದೆದ್ದ ತೆಲುಗು ಡಿಜಿಟಲ್ ಚಲನಚಿತ್ರ ಪತ್ರಕರ್ತರ ಸಂಘವು ಅವರ ವಿರುದ್ಧ ತೆಲಂಗಾಣ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಇತ್ತೀಚಿನ ಬೆಳವಣಿಗೆಯಲ್ಲಿ ಹೈಕೋರ್ಟ್ ಈ ಬಗ್ಗೆ ತನಿಖೆ ಮಾಡುವಂತೆ ಸೂಚನೆ ಕೊಟ್ಟಿದೆ. ವರದಿಗಳ ಪ್ರಕಾರ, ವೇಣು ಸ್ವಾಮಿ ಕೋರಿದ್ದ ತಡೆಯಾಜ್ಞೆ ಅರ್ಜಿ ವಜಾಗೊಳಿಸಿದ ನ್ಯಾಯಾಲಯ, ಇದೀಗ ಆಯೋಗಕ್ಕೆ ತನಿಖೆ ಮುಂದುವರಿಸಲು ಅನುಮತಿ ನೀಡಿದೆ.
ಮಹಿಳಾ ಆಯೋಗಕ್ಕೆ ತನಿಖೆ ಮುಂದುವರಿಸಲು ಅಸ್ತು ಎಂದಿರುವ ಹೈಕೋರ್ಟ್, ದೂರನ್ನು ಅಗತ್ಯವಿರುವಂತೆ ಪರಿಹರಿಸುವ ಅಧಿಕಾರವನ್ನು ಹೊಂದಿದೆ ಎಂದು ತಿಳಿಸಿದೆ. ಹೈಕೋರ್ಟ್ ನಿರ್ದೇಶನದ ಹಿನ್ನಲೆಯಲ್ಲಿ ವೇಣು ಸ್ವಾಮಿಯನ್ನು ಇದೀಗ ವಿಚಾರಣೆಗೆ ಒಳಪಡಿಸಿರುವ ಆಯೋಗ, ಒಂದು ವಾರದೊಳಗೆ ತನಿಖೆ ಮುಗಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿರುವುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).